“ಅವರೇನು ಬರೆದಿಹರು ಅಂತಹ ಮಹತ್‌ಕಾವ್ಯ?”
“ಅವರು ಬರೆದುದು ಮಹತ್‌ಕವಿತೆ ಇರದಿರಬಹುದು;
ಅವರು ಬದುಕಿದುದೆಲ್ಲ ಮಹತ್‌ಕವನಗಳೆ ಅಹುದು:
ಅವರೆ ತಾವೊಂದು ಗೊಮ್ಮಟಸಮ ಮಹಾಕಾವ್ಯ!”

‘ಸಂತನಾಗಲು ಬಲ್ಲ ಆವನೂ ಸುಧೀರಮತಿ
ಕವಿಯಾಗಲೊಲ್ಲ!’ – ಪಡಿವಣದ ಈ ಕವಿ ಉಕ್ತಿ
ಪಡೆದಿಹುದು ಉಪನಿಷತ್ತಿನ ಮಂತ್ರ-ಋತಶಕ್ತಿ:
ಬದುಕಿಗಿಲ್ಲದ ಬೆಲೆಯ ಬೀಡೆ ಸಾಹಿತ್ಯಕೃತಿ?

ಬದುಕಿನಿಂದಲೆ, ಬದುಕಿಗಾಗಿಯೆ ಕಣಾ ಕಲೆಯ ಬೆಲೆ:
ಕವಿಯ ಬಾಳ್ವೆಯೆ ದಿಟದ ಕಾವ್ಯಬೆಲೆ, ರಸದ ನೆಲೆ!
ಕವಿಯ ಬದುಕಿಂದೈಸೆ ಅವನ ಕೃತಯಕ್ಕು – ‘ಕಲೆ’?

ಕಲೆಯ ಬಾಳ್ವೆಗೆ ಮಿಗಿಲ್ ಬಾಳ್ವೆಯ ಕಲೋಲ್ಲಾಸ:
ಕಲೆ ಸಂಸ್ಕೃತಿವಿಲಾಸ; ಬಾಳ್ ಸೃಷ್ಟಿಗೆ ವಿಕಾಸ!

ನೂರು ಕಾವ್ಯಕೆ ಸಾರವೊಂದು ಸಾಕ್ಷಾತ್ಕಾರ:
ಕವಿಯ ದರ್ಶನ ಅಗ್ನಿದರ್ಪಣ ತಪಃಸಂಸಾರ!

ನಿನ್ನ ಮಂಜೇಶ್ವರದ ಬೀಡು, ಕಾಸರಗೋಡು,
ಮುನ್ನಿನಂತೆಯೆ ಮತ್ತೆ ತಾನಾಗೆ ಕನ್ನಡ ನಾಡು,
ತನ್ನ ಸತ್ವಕೆ ಸಾಕ್ಷಿ ತನದುವೆ ಕನ್ನಡ ಜನತೆ
ಕವಿಗೆ ಕಡೆಯುವ ಜಯಶ್ರೀಸ್ಮಾರಕಂ ತಾನಲ್ತೆ!

೨೪ – ೦೯ – ೧೯೬೩