ಚಂದ್ರನ ತಲುಪಿತೆ ರಷ್ಯದ ರಾಕೆಟ್,
ದ್ವಿತೀಯ ಲೂನಿಕ್?
ನನಗೇತಕೆ ಈ ರೋಮಾಂಚ?
ಈ ಉನ್ಮೇಷ?
ಈ ಉನ್ಮಾದ?
ಈ ಆನಂದ?


ಮಾನವ ಸಾಹಸ ಮುಗಿಲಿಗೆ ತಿರುಗಿತೆ?
ನಾಶದ ಮಾರ್ಗವ ತೊರೆದೀತೆ?
ಶುಕ್ರಗ್ರಹ ನಿವಾಸಿಗಳಲ್ಲಿ
ನಮ್ಮನು ಸಂಧಿಸಿಯಾರೆ?
ಗ್ರಹ ಮಂಗಳದಿಂ ಬಂದಾ
ಮಹನ್ ಮಾತೃನೌಕೆ
ಸ್ವಾಗತಿಪುದೆ ಮರ್ತ್ಯರನಲ್ಲಿ?
ದಿಟವೋ? ಸೆಟೆಯೋ ಮುಂದೇನೋ?
ಪೀಡಿಸುತಿದೆ ಈ ಭೂ-ಮನವನು ಒಂದಾವುದೊ
ಭೂಮ ನಿರಿಕ್ಷೆ!


ಅರಿಜೋನ ಮರುಭೂಮಿ ಅಂದು ಪಲವತ್ತಾಯ್ತು
ಅಯ್‌ಡಮ್‌ಸ್ಕಿ ಶುಕ್ರಗ್ರಹ ನಿವಾಸಿಯನು
ಸಂಧಿಸಿದ ಆ ಭವ್ಯದಿನದಂದು!
ಮತ್ತೊಮ್ಮೆ ಇಂದು
ಮಾನವನಾಶೆಯ ಮರುಭೀಮಿಗೆ ಮಳೆ ಹೊಯ್ದಂತಾಯ್ತು
ಈ ಸುದ್ಧಿಯ ಕೇಳಿ:
ಈ ಸುದ್ದಿಯ ಮುಂದೆ ಉಳಿದೆಲ್ಲವು ಸಪ್ಪೆ!
ಚೀಣದ ಗಡಿ ಆಕ್ರಮಣವೂ ಬರಿ ಬಾವಿಯ ಕಪ್ಪೆ!
ಅಮೇರಿಕಾಕ್ಕೆ ಕ್ರುಶ್ಚೇವ್ ಕೊಡಲಿಹ ಬೇಟಿಯು ಕೂಡ-ಹಿಪ್ಪೆ!

೧೪ – ೦೯ – ೧೯೫೯