ಎಂಜಲಿಗಂಜಲಿಯೊಡ್ಡಿದ ಕವಿಯಿಂ
ಬಯಸುವಿರೇನನ್ನು?
ತಿಂಗಳ ತಲುಬಿಗೆ ತೊತ್ತಾದವನಿಂ
ಪಡೆಯುವಿರೇನನ್ನು?
ಮೇಲಧಿಕಾರಿಯ ದರ್ಪದ ನೊಗಕೆ
ಹೆಗಲನು ಕೊಟ್ಟವನು;
ಮುಂದೆಯ ಬಾಳಿನ ಮಂದಿಯ ಸೊಗಕೆ
ತೇಜಂಗೆಟ್ಟವನು;
ಕಾಡಿನ ಬಯಲಿನ ಬಾನಿನ ಮುಕ್ತಿಗೆ
ಎಳ್ನೀರ್ ಬಿಟ್ಟವನು;
ಚಿನ್ನದ ಬೋನಿನ ಬಣ್ಣದ ಮೋಹಕೆ
ದಾಸ್ಯವ ತೊಟ್ಟವನು;
ಹೊನ್ನಿನ ಸಂಕಲೆಗೊಡವೆಯ ಬಿರುದಿನ
ಹಿರಿ ಹೆಸರಿಟ್ಟವನು;
ಹಿಂದಣ ದಿವ್ಯಾದರ್ಶವ ವಂಚಿಸಿ
ಗುರಿ ಕಂಗೆಟ್ಟವನು;
ತನ್ನೊಳಗಿಟ್ಟಾ ನಾಡಿನ ಬಯಕೆಗೆ
ಚಿತೆಯರಿ ಇಟ್ಟವನು;
ಕಲೆಯ ಹಿರಿಮೆಯನು ತಿರೆಬಾಳೇಳ್ಗಗೆ
ಕೊಲೆಬಲಿಗೊಟ್ಟವನು!
ಎಂಜಲಿಗಂಜಲಿಯೊಡ್ಡಿದ ಕವಿಯಿಂ
ಬಯಸುವಿರೇನನ್ನು?
ತಿಂಗಳ ತಲುಬಿಗೆ ತೊತ್ತಾದವನಿಂ
ಪಡೆಯುವಿರೇನನ್ನು?
ಸಾಯಲಿ, ಹಾಳಾಗಲಿ, ಕೀರ್ತಿಯ ಮುದಿ ಬಾಯಿಗೆ ನೀರುಬಿಡಿ!
ಮರೆವೆಯ ಹೊಳೆನೀರಲಿ ಹೆಸರಿನ ಹೆಣಬೂದಿಯ ತೇಲಿಕೊಡಿ!
೨೪ – ೦೯ – ೧೯೩೭
Leave A Comment