ಹೇ ನವ ಸಂವತ್ಸರ ದೇವ,
ನಾಮವೆ ನಿನಗೆ – ‘ಪರಾಭವ!?’
ಯಾರಿಗೆ ನೀ ಪರಾಭವ,
ಓ ಹೊಸ ವರ್ಷದ ಶಿವ?

ಅಸುರರಿಗೆ ನೀ ಪರಾಭವ;
ಸುರರಿಗೆ ನೀ ವಿಜಯೀ ಭವ!
ಪಾಕಿಸ್ತಾನಕೆ ಪರಾಭವ;
ಹಿಂದುಸ್ತಾನಕೆ ವಿಜಯೀ ಭವ!
ಅಧರ್ಮಕೆ ನೀ ಪರಾಭವ;
ಅಸತ್ಯಕೆ ನೀ ಪರಾಭವ;
ಅಧೈರ್ಯಕೆ ನೀ ಪರಾಭವ;
ಅಕರ್ಮಕೆ ನೀ ಪರಾಭವ;!

ಸತ್ಯಕೆ ನೀ ವಿಜಯೀ ಭವ;
ತ್ಯಾಗಕೆ ನೀ ವಿಜಯೀ ಭವ;
ಸದ್‌ಧರ್ಮಕೆ ನೀ ವಿಜಯೀ ಭವ;
ಸತ್‌ಕರ್ಮಕೆ ನೀ ವಿಜಯೀ ಭವ!

ದುಷ್ಟರಿಗೆ ನೀ ಪರಾಭವ;
ಶಿಷ್ಟರಿಗೆ ವಿಜಯೀ ಭವ;
ಕಾಮಕೆ ನೀ ಪರಾಭವ;
ಪ್ರೇಮಕೆ ವಿಜಯೀ ಭವ!

ದುರ್ಭಿಕ್ಷಕೆ ನೀ ಪರಾಭವ;
ಸುಭಿಕ್ಷಕೆ ವಿಜಯೀ ಭವ;
ಬಲಾತ್ಕಾರದಿಂಗ್ಲೀಷಿಗೆ
ನೀ ಪರಾಭವ!
ವಿಜಯೀ ಭವ; ವಿಜಯೀ ಭವ,
ಕನ್ನಡಕ್ಕೆ ವಿಜಯೀ ಭವ!
ವರ್ಣಾಶ್ರಮಕೆ ನೀ ಪರಾಭವ!
ಜಾತಿಪದ್ಧತಿಗೆ ನೀ ಪರಾಭವ!
ಅನೈಕ್ಯತೆಗೆ ನೀ ಪರಾಭವ!
ಮತೀಯತೆಗೆ ನೀ ಪರಾಭವ!

ವೇದಾಂತಕೆ ವಿಜಯೀ ಭವ;
ವಿಜ್ಞಾನಕೆ ವಿಜಯೀ ಭವ;
ನಿರ್ಮೌಢ್ಯಕೆ ವಿಜಯೀ ಭವ;
ಆಧ್ಯಾತ್ಮಕೆ ವಿಜಯೀ ಭವ!

ಸೋವಿಯತ್ತಿಗೆ ವಿಜಯೀ ಭವ;
ಚೀಣಕೆ ನೀ ಪರಾಭವ!
ಅಮೇರಿಕಾಕೆ ವಿಜಯೀ ಭವ!
ಪೋರ್ಚುಗಲ್ಲಿಗೆ ಪರಾಭವ!

ಆಂಗ್ಲೇಯರ ಅಲ್ಪತ್ವಕೆ
ಆಗು ನೀ ಪರಾಭವ!
ಆಂಗ್ಲೇಯರ ಔದಾತ್ತ್ಯಕೆ
ಜಯ ವಿಜಯೀ ಭವ!
ಹಿಂಸೆಗೆ ನೀ ಪರಾಭವ!
ಅಹಿಂಸೆಗೆ ವಿಜಯೀ ಭವ!

ಸ್ವಾತಂತ್ರ್ಯಕೆ ವಿಜಯೀ ಭವ;
ದಾಸ್ಯಕೆ ನೀ ಪರಾಭವ!
ಸೌಂದರ್ಯಕೆ ವಿಜಯೀ ಭವ;
ದಾರಿದ್ರ್ಯಕೆ ಪರಾಭವ!
ವಿಜಯೀ ಭವ, ವಿಜಯೀ ಭವ,
ಹೇ ಹರ್ಷಹರ್ಷ ಪರಾಭವ!
ವಿಜಯೀ ಭವ, ವಿಜಯೀ ಭವ,
ಹೇ ನವ ವತ್ಸರಪುರುಷ ಶಿವ!

೨೭ – ೦೩ – ೧೯೬೬