ತಂಬಿಗೆ ಕೇಳಿತು ಬಿಂದಿಗೆಯ:

“ಓ ನೀರು ತುಂಬಿದ ಬಿಂದಿಗೆ,
ಸಹರಾ ಮರುಭೂಮಿಗೆ ಹೊರಟಿದ್ದೀಯಾ?”
ದೊಡ್ಡ ಬಿಂದಿಗೆ ಹೇಳಿತು ಹಿಗ್ಗಿ:
“ಹೌದು, ಮಾಡಲದನು ಫಲವತ್ತಾಗಿ!”
ಪುಟ್ಟ ತಂಬಿಗೆ ತನ್ನ ಸಂದೇಹವನು
ಒರೆಯಿತಿಂತು:

“ಹೇಳುತ್ತಾರೆ,
ಅದರ ವಿಸ್ತೀರ್ಣ ಸಾವಿರಾರು ಚದರಮೈಲಿಗಳಂತೆ;
ಅಲ್ಲಿ ಮಳೆಯಿಲ್ಲ; ಬರಿಯ ಉರಿಬಿಸಿಲಂತೆ;
ಹಸುರು ಎಸಳಿಲ್ಲದಿಹ ಬರಿಯ ಮರಳುಗಾಡಂತೆ!
ಒಂದಲ್ಲ ಎರಡಲ್ಲ
ನೂರುಸಾಗರಗಳೆ ಅದರ ಮೇಲುಕ್ಕಿದರೂ
ಇಂಗಿಹೋಗುವ ಬಡಬ – ಬೇಗೆ ಅದಕ್ಕಂತೆ!
ನೀನು
ಒಂದೆರಡು ಕೊಡ ನೀರು ತುಂಬಿರುವ ಬಿಂದಿಗೆ,
ನನಗೆನಿತು ಹಿರಿಯನಾದರೂ,
ಕ್ಷಮಿಸು,
ಕೋಟಿಯೋಜನದಗಲ ಮರುಭೂಮಿಯನು
ಮಾಡಬಲ್ಲೆಯ ಹೇಳು ಫಲವತ್ತಾಗಿ?
ಹಿರಿಯ ಆ ವ್ಯರ್ಥಸಾಹಸವನುಳಿದು,
ನಮ್ಮ ಈ ಚಿಕ್ಕ ತೋಟದಲ್ಲಿಯೆ ನಿಂತು
ಈ ಸಣ್ಣ ಗಿಡಗಳಿಗೆ ನೀರೆರೆದರೆ
ಅಲ್ಪವಾದರೂ, ಅಣ್ಣಾ, ಸಫಲವಲ್ತೆ?”
ತಂಬಿಗೆಯ ನುಡಿಗೇಳ್ದು
ಹಿತ್ತಳೆಯ ಬಿಂದಿಗೆ ರಬ್ಬರಿನಂತುಬ್ಬಿ
ನಕ್ಕಿತು ತಿರಸ್ಕರಿಸಿ:
“ಬೆಪ್ಪೆ,
ಈ ಕೊಂಪೆಯಲಿ ನನ್ನ ಸಾಹಸವ ನೋಡುವವರಾರು?
ಅದನು ನೋಡಲು ನೆರೆಯಲಾದರೂ ನಾಲ್ಕುಜನ ಇಹರೆ ಇಲ್ಲಿ?
ಇಲ್ಲಿರುವ ನಿನ್ನ ಪತ್ರಿಕೆಯೊ ಮೂರು ಕಾಸಿನದು!
ಅದಕಿರುವುದೊಂದೆ ಹಾಳೆ!
ಅದಕೆ ಚಂದಾದಾರರೂ
ಬೆರಳೆ ಮಿಗುವುವು ಎಣಿಸೆ!
ಸಹರಾಕೆ ನೀರೆರೆಯೆ ನಾ ಹೊರಟರೆ
ಸುದ್ದಿ ಹಬ್ಬುವುದು ದೇಶ ದೇಶದಲಿ!
ಬೇರೆ ಬೇರೆಯ ಭಾಷೆಯ ಮಹಾ ಪತ್ರಿಕೆಗಳಲಿ,
(ನಿನ್ನ ಮೂರುಕಾಸಿನ ಒಂದೆ ಹಾಳೆಯ ಪತ್ರಿಕೆಗಳಲ್ಲ!)
ಪುಟ ಪುಟಗಳನೆ ತುಂಬುವುವು ನನ್ನ ಚಿತ್ರಗಳೆ!
ಬರೆವರು ಮಹಾಕವಿಗಳೆನ್ನನೆಯೆ ಹಾಡಿ!
ಹೋಲಿಸುವರೆನ್ನನು ಭಗೀರಥಗೆ ಎಣೆಮಾಡಿ!” –

“ಆದರೇನು ಪ್ರಯೋಜನ, ಅಣ್ಣಾ?
ನಿನ್ನೆರಡು ಕೊಡ ನೀರಿನಲಿ ಫಲವತ್ತಾಗುವುದೆ ಸ ಹ ರಾ?” –

“ಅದು ಫಲವತ್ತಾದರೆಷ್ಟು? ಆಗದಿದ್ದರೆಷ್ಟು?
ನನ್ನ ಹೆಸರಾಗುವುದು ಲೋಕಪ್ರಸಿದ್ಧ!
ಅದಕಿಂತಲೂ ಯಾವುದಯ್ಯಾ – ‘ಪ್ರಯೋಜನ’?”

೧೦ – ೦೪ – ೧೯೫೯