ಪಾರುಮಾಡೆಮ್ಮನೀ ಇಂಗ್ಲೀಷಿನಿಂದ,
ಪೂತನಿಯ ಅಸುವೀಂಟಿ ಕೊಂದ ಗೋವಿಂದ!
೧
ಅಂದು ಹಾಲೆಂದು ವಿಷವೂಡಲೈತಂದ
ಮಕ್ಕಳಾ ಮಾರಿಯನು ರಕ್ಕಸಿಯ ಕೊಂದ
ಹೇ ಕೃಷ್ಣ, ಹೇ ಬಾಲಗೋಪಾಲ, ಕಂದಾ,
ಪಾರುಮಾಡೆಮ್ಮನೀ ಇಂಗ್ಲೀಷಿನಿಂದ,
ಪೂತನೀಯ ಅಸುವೀಂಟಿ ಕೊಂದ ಗೊವಿಂದ!
೨
ತಾಯ ಮೊಲೆಯಂದದಲಿ ತೋರ್ಪವಳ ಕಬ್ಬಿಣದ
ಹೇರೆದೆಯ ಕೆಚ್ಚಲನು ಬಾಯ್ಗಿಟ್ಟು, ತುಟಿಹರಿದು,
ರಕ್ತಸೋರುವ ನಮ್ಮನೊಲಿದು ಕಾಪಾಡಯ್ಯ;
ಭಾರತಿಯ ಮಕ್ಕಳಾಯುವ ರಕ್ಷಿಸಯ್ಯಾ!
ಪಾರುಮಾಡೆಮ್ಮನೀ ಇಂಗ್ಲೀಷಿನಿಂದ,
ಪೂತನೀಯ ಅಸುವೀಂಟಿ ಕೊಂದ ಗೊವಿಂದ!
೩
ಹೊಟ್ಟೆಗೂ ಹಾಲಿಲ್ಲ; ಬಾಯಿಗೂ ಬಿಡುವಿಲ್ಲ;
ಕೆಟ್ಟವಯ್ಯಾ ಈ ಬೆಟ್ಟಬಂಡೆಯ ನಂಬಿ;
ಕೊಟ್ಟಕೊನೆಗೂ ಬರಿಯ ದಣಿವು ಬಾಯಾರಿಕೆ!
ನಮ್ಮ ನುಡಿ – ಗೋಮಾತೆಯಾ ಮೆತ್ತಗೆಚ್ಚಲಿಗೆ
ಬಾಯಿಟ್ಟರಾಯ್ತು ಹೊಡೆತುಂಬೆ ನೊರೆಹಾಲಿರಲು
ಏಕಯ್ಯ ಈ ಬರುಡು ಪೂತನಿಯ ಹಾಲ್ದೋರಿಕೆ?
ಹೇ ಕೃಷ್ಣ, ಹೇ ಬಾಲಗೊಪಾಲ, ಕಂದಾ,
ಪಾರುಮಾಡೆಮ್ಮನೀ ಇಂಗ್ಲೀಷಿನಿಂದ,
ಪೂತನೀಯ ಅಸುವೀಂಟಿ ಕೊಂದ ಗೊವಿಂದ!*
೨೧ – ೦೧ – ೧೯೬೨
* ಭಾರತದ ವಿವಿಧ ರಾಜ್ಯಗಳ ಮುಖ್ಯಮಂತ್ರಿ ಮಹನೀಯರುಗಳು ನಿರ್ಧರಿಸಿದಂತೆ ಇಂಗ್ಲೀಷನ್ನು ಮೂರನೇ ತರಗತಿಯಿಂದಲೇ ಪ್ರಾರಂಭಿಸುತ್ತಾರೆಂಬ ದೇಶ ವಿನಾಶಕವಾದ ಅಮಂಗಳ ವಾರ್ತೆಯನ್ನು ಕೇಳಿ ಬರೆದದ್ದು.
Leave A Comment