ಯಾಕಿಂತು
ಕ್ಯೂ ನಿಂತು
ನುಗ್ಗುತಿರುವಿರಿ ಜನ್ಮಧಾರಣೆಗೆ,
ಓ ನತದೃಷ್ಟ ಜೀವಗಳಿರಾ?

ನಿಮಗೆ ಕಾಣುವುದಿಲ್ಲ?
ಭೂಮಿ ತುಂಬೆಲ್ಲ
ಜನಸಂಖ್ಯೆ ಏರಿ ಕಿಕ್ಕಿರಿದು ಮೀರಿ,
ಕಂಕಾಲ ಪಂಕ್ತಿ, ಹೊಟ್ಟಿಗಿಲ್ಲ!

ಏನು ಅವರಸರ ನಿಮಗೆ?
ಯಾವ ಗರ್ಭವೊ ಏನೊ?
ಯಾರ ಯೋನಿಯೊ ಏನೊ?
ಅಂತು ಹುಟ್ಟಿದರಾಯ್ತು
ಭೂಮಿಯಲ್ಲಿ!
ಉಸಿರು ಕಟ್ಟಿಹುದೇನು ನಿಮಗೆ ಅಲ್ಲಿ?

ಗುಂಗುರು ಕ್ರಿಮಿಕೀಟ ಕುಲವ ಹೆರುವ ಅತ್ತಿಹಣ್ಣೆ
ನಾಚಿ ಸೋಲುವಂತೆ,
ಕೋಟಿ ಕೋಟಿ ಕೋಟಿ ಕೋಟಿ
ನಿಮಸ ನಿಮಿಷಕೆ ಹುಟ್ಟಿ ಮುಲುಗುಡುವ ಶಿಶು ಸಂಖ್ಯೆಯಲ್ಲಿ,
ನಮಗೇ ಇಲ್ಲಿ,
ಹೊಟ್ಟಿಗಿಲ್ಲದೆ, ವಿವಿಧ ಬಟ್ಟೆಗಳಲ್ಲಿ,
ಕೆರೆ ಕಟ್ಟೆ ಬಾವಿ ಇಲಿಪಾಷಾಣ ಫಾಲಿಡಾಲು
ತಿಗಣೆಔಷಧಿ ನೇಣುರುಳು ದಾರಿಗಳಲಿ ದಿನಾಲು
ನುಗ್ಗುತಿಹೆವಲ್ಲಾ ನಿಮ್ಮತ್ತ ಕಟೆಗೇ!?
ನೀವಿತ್ತ ಬರದಂತೆ ತಟೆಗಟ್ಟಲೆಂದು
ನೀವು ಐತರುವ ಕಂಡಿಗಳನೆಲ್ಲ ಅಡಕಲೆಂದು
ರಾಸಾಯನಿಕ ರಬ್ಬರುಂಗುರ ಕಾಂಡಮಿತ್ಯಾದಿ
ಕೃತಕ ನಾನಾ ಉಪಾಯ ಸಾಧನಗಳಿಂದೆ,
ಸಂನ್ಯಾಸ ಬ್ರಹ್ಮಚರ್ಯ ಮೋಕ್ಷಾದಿ
ಆದರ್ಶದಾಕರ್ಷಣೆಯ ಬೋಧನೆಗಳಿಂದೆ
ಮಾನವರು ಕಟ್ಟುತಿಹ ಕಟ್ಟೆಗಳನೆಲ್ಲ
ಬಿರಿದೊಡೆದು ಕೊಚ್ಚಿ ಹೊನಲುಕ್ಕಿ
ನುಗ್ಗುತಿರಲ್ಲಾ ಇತ್ತ ಕಡೆಗೇ?!
ಅಯ್ಯಯ್ಯೊ
ಏನು ಬಂದಿದೆ ನಿಮಗೆ ಅಲ್ಲಿ ಆತಂಕ?
ಕಾದಿರದೆ ನಿಮಗಿಲ್ಲಿ ಘೋರತರ ನರಕ?

ಯಾಕಿಂತು
ಕ್ಯೂ ನಿಂತು
ನುಗ್ಗುತಿರುವಿರಿ ಜನ್ಮಧಾರಣೆಗೆ,
ಓ ನತದೃಷ್ಟ ಪ್ರೇತಗಳಿರಾ?

೨೮ – ೦೩ – ೧೯೬೬