ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ;
ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ!

ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ:
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ!

ಮುಂದೆ ದಿಳ್ಳಿಯ ಮಂತ್ರಿಯಾಗುವವ ನೀನೊ?
ಬೇಡವೆಂಬುವರಾರು? ಹಿಂದಿಯನು ಕಲಿಯೊ!
ಬದುಕಿ ಇಲ್ಲಿಯೆ ಬಾಳಿ ಸಾಯುವವ ನಾನೊ!
ನಿನ್ನ ಸೂತ್ರಕೆ ಏಕೆ ನನ್ನ ಬಲಿಯೊ?

ಮುಂದೆ ಇಂಗ್ಲೆಂಡಿನಲಿ ನೀ ರಾಯಭಾರಿ?
ಬೇಡವೆಂಬುವರಾರು?
ಹೊಡೆಬಿರಿಯೆ ಕುಡಿಯೊ ಇಂಗ್ಲಿಷಿನ ಹೆಂಡ ಹೀರಿ!
ನನ್ನ ಮೇಲೇತಕ್ಕೆ ಮಾಡುವೆ ಬಲಾತ್ಕಾರ ಸವಾರಿ?

ನೀನು ಅಂತರರಾಷ್ಟ್ರ ಕೀರ್ತಿಯಂ ಪೊತ್ತು ಗರ್ಜಿಸುವ
ಜಗತ್‌ಪ್ರಸಿದ್ಧ ಹುಲಿಯೆ?
ಇದೆಗೊ ನಿನಗೆನ್ನ ಭೋ ಪರಾಕು!
ನಾನು ಅಜ್ಞಾತ ಅಖ್ಯಾತ ಅನಾಮಕ ಅಲ್ಪ ಇಲಿಯೆ?
ಇರಲಿ:
ಕನ್ನಡದ ಬೆನಕದೇರನ್ನೆಳೆವ ಈ ಧನ್ಯತೆಯೆ ಸಾಕು!

೨೦ – ೦೯ – ೧೯೬೩