ಶೂದ್ರಕೋಳಿ ಮೇಯುತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮನಾಯಿ ಹೊಂಚುತಿತ್ತು
ಅಲ್ಲಿ ಇಲ್ಲಿ.
ಶೂದ್ರಕೋಳಿಗೇನು ಗೊತ್ತು,
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮ ಮೇಯುತಿತ್ತು.

ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನ ಪಟ್ಟೆ;
ಒಡಲಿನಲ್ಲಿ ಖಾಲಿಹೊಟ್ಟೆ!
ಮೆಲ್ಲ ಮೆಲ್ಲ ಸುಲಿದು ಸುತ್ತಿ
ಹತ್ತೆ ಬಂತು;
ಸಾಧು ಎಂದು ಶೂದ್ರಕೋಳಿ
ನೋಡೆ ನಿಂತು,
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾರ್ವವೀಡಿನೊಂದು ಗೋಡೆ
ರಕ್ಷೆಯಾಯ್ತು:
ಪಾರ್ವನಾಯ್ಗೆ ಶೂದ್ರಕೊಳಿ
ಭಕ್ಷವಾಯ್ತು!

ಮುರಿಯತನದಿ ಮೊದಲುಗೊಂಡು
ಸಾಕಿ ಸಲಹಿ ಒಲಿದ ತನ್ನ
ಪುಟ್ಟ ಮುದ್ದು ಹುಂಜಗಾಗಿ,
ಕರುಣ ತುಂಬಿದೆದೆಯ ದೇವಿ,
ಗೊಳೋ ಎಂದು ಹುಡುಗಿಯೊಂದು
ಅಳುತಲಿತ್ತು.
‘ಶುದ್ದ ಶೂದ್ರ ಹುಡುಗಿ’ ಎಂದು
ಹಾರ್ವನೊಡನೆ ಹಾರ್ತಿ ನಿಂದು,
ಕೇಲಿಗಾಗಿ ಗೇಲಿ ಮಾಡಿ
ಬೀದಿ ಬಾಗಿಲಲ್ಲಿ ಕೂಡಿ
ಬ್ರಾಹ್ಮವೃಂದ ಚೆಂದ ನೊಡಿ
ನಗುತಲಿತ್ತು!

೧೦ – ೦೬ – ೧೯೫೦


* ಸಂಭವಿಸಿದ ಒಂದು ಘಟನೆಯಿಂದ ಪ್ರೇರಿತ.