“ಓ ನನ್ನ ಮುದ್ದು ಕುರಿಮರಿ,
ನಿನ್ನ ಕಂಡರೆ ನನಗೆ ವಾತ್ಸಲ್ಯ ಉಕ್ಕುತಿದೆ;
ನನ್ನ ಅಕ್ಕರೆ ತನ್ನ ಮನದೊಳೆ ನಿನ್ನ ಮೈನೆಕ್ಕುತಿದೆ!
ನೀನು ತಬ್ಬಲಿ ಎಂದು ಕೇಳಿ
ಬೇಯುತಿದೆ ಹೊಟ್ಟೆ, ಮರುಕ ತಾಳಿ.
ಓ ನನ್ನ ಮುದ್ದು ಕುರಿಮರಿ,
ನಿನ್ನದೆಲ್ಲಾ ಸರಿ;
ಆದರೊಂದೇ ನನಗೆ ಹೃದಯದುರಿ:
ನಿನ್ನ ಈ ಪ್ರತ್ಯೇಕತಾ ಪರಿ
ನನಗೆ ತೋರುವುದಿಲ್ಲ ಸರಿ!


“ನೀನು ನಾನು ಒಂದಾದರೆ
ಮುಗಿಯಿತೆಂದೆ ಅರಿ
ನಿನ್ನ ತೊಂದರೆ,
ಮುದ್ದು ನನ್ನ ಓ ಮರಿ!
ಬೇರೆಯಾಗಿ ದೂರ ನಿಂತು
ಏಕೆ ಪಾಡು ಪಡುವೆ ಇಂತು?
ಬಾ, ಬಾ, ಬಳಿಗೆ ಬಾ;
ನನ್ನಳೈಕ್ಯವಾಗು ಬಾ.
ಐಕ್ಯದೊಳೇ ಇಹುದು ಬಾಳು;
ಅನೈಕ್ಯತೆಯೆ ನೋವು, ಗೋಳು.


“ಅಂದು ನನ್ನ ಪೂರ್ವಜ
ನಿನ್ನ ಆ ಪೂರ್ವಜಗೆ
ಹೇಳಿದಂತೆ ಹೇಳೆ ನಾನು
‘ನೀರು ಎಂಜಲಾಯ್ತು’ ಎನ್ನೆ ನಾನು.
‘ನನ್ನನೇಕೆ ಬೈದೆ ನೀನು?’ ಎನ್ನೆ ನಾನು.
‘ನೀನೆ ಅಲ್ಲದಿದ್ದರೇನು?
ನಿನ್ನ ಅಪ್ಪ ಬೈದರೇನು?
ಆ ತಪ್ಪು ಮಗನದಾಗದೇನು?’
ನಿನ್ನ ಅಪ್ಪ ಬೈದ ಎಂದು
ಅನ್ಯಾಯದಿ ನಿನ್ನ ಕೊಂದು
ತಿನ್ನಲೊಲ್ಲೆ ನಾನು ಇಂದು.”


“ನನ್ನ ಹೃದಯದಲ್ಲಿ ನಿನಗೆ
ಬೇಕಾದಷ್ಟು ಜಾಗವಿದೆ;
ನೀನು: ತಿಂದು ತೇಗುವಷ್ಟು
ನನ್ನ ಹೊಟ್ಟೆಯಲ್ಲಿ ನಿನಗೆ
ಬೇಕಾದಷ್ಟು ಭೋಗವಿದೆ.
ನಿನಗೆ ಏಕೆ ಬೇರೆ ಭಾಷೆ?
‘ಮೆಹೆಹೆ! ಮೆಹೆಹೆ! ಮೆಹೆಹೆ! ಮೆಹೆಹೆ!’
ಬರಿಯ ಗುಡ್ಡಗಾಡು ಭಾಷೆ!
ನನ್ನದೊ ಅದು ವಿಶ್ವಭಾಷೆ!
ಪ್ರಪಂಚಕೇ ರಾಷ್ಟ್ರಭಾಷೆ!
ನಾನು ಬೇರೆ ಎಂಬ ಭ್ರಾಂತಿ
ಅದೇ ಮೂಲ ಜಗಕ್ಕಶಾಂತಿ!”


“ಹೊಂಚುತಿಹನು ದುಷ್ಟವ್ಯಾಘ್ರ,
ಅದರ ಬಾಯ್ಗೆ ಬೀಳಬೇಡ;
ನೊಂಕುತಾಚೆಗೆಲ್ಲ ಕೇಡ
ಬಾ ನನ್ನ ಒಳಗೆ ಶೀಘ್ರ!
ನೀನು ನಾನು ಬೇರೆ ಜಾತಿ
ಎಂಬುವವರ ಕುಹಕ ನೀತಿ
ನಂಬಿದರದೆ ನಮಗೆ ಭೀತಿ?
ಒಂದೆ ನೀತಿ, ಒಂದೆ ಜಾತಿ,
ಒಂದೆ ನಾಡು, ಒಂದೆ ಬೀಡು,
ಒಂದೆ ಒಂದೆ ಒಂದೆ ಒಂದೆ
ನಾವೆಲ್ಲರೂ ಒಂದೇ!
ನಿನಗೆ ಸುಖವು ಬೇಕೆ ಹೇಳು;
ನನ್ನ ಮಾತು ಕೇಳು:
ಬಳಿಗೆ ಬಾ, ಒಳಗೆ ಬಾ;
ನನ್ನೊಳಾಗಿ ನನ್ನನಾಳು!
ನೀನೆ ನಾನು, ನಾನೆ ನೀನು,
ಆಗಿ, ಸುಖದಿ ಬಾಳು!”

೧೦ – ೧೦ – ೧೯೬೨