ಇತ್ತ

ಡಕಾಯಿತರು ಮೂರು ಮಂದಿ
ಬಂದು ವಿನೋಬರ ಪ್ರಾರ್ಥನಾ ಸಭೆಗೆ
ಅವರ ಕಾಲುಮುಟ್ಟಿ ನಮಿಸಿ
ಶರಣಾದರಂತೆ!
ಪತ್ರಿಕೆಗಳು ಚಿಕ್ಕಕ್ಕರದಲಿ ಹ್ರಸ್ವವಾಗಿ ಮುದ್ರಿಸಿವೆ,
ಒಂದು ಮೂಲೆಯಲ್ಲಿ!

ಅತ್ತ ಕ್ರುಶ್ಚೇವ್, ಐಕ್, ಮಾಕ್ಮಿಲನ್, ಡಿಗಾಲ್
ಭಿನ್ನಾಭಿಪ್ರಾಯದಾ ಇಕ್ಕುಳಕೆ ಸಿಕ್ಕಿ
ಪ್ಯಾರಿಸ್ಸಿನ ಶೃಂಗಸಭೆ ವಿಫಲವಾಯಿತಂತೆ!
ಪತ್ರಿಕೆಗಳೆಲ್ಲ ದಪ್ಪಕ್ಕರದಲಿ ದೀರ್ಘವಾಗಿ
ವರದಿ ಮಾಡಿರುವ ಪ್ರಮುಖ ಸುದ್ದಿ!

ಕವಿಗೆ ಕಕ್ಕಾವಿಕ್ಕಿ:
ಯಾವುದು ಮಹತ್ತರ?. ….
ಅರ್ಥವಿಲ್ಲದ ಪ್ರಶ್ನೆಗೆ
ಸುಮ್ಮನಿರುವುದೆ ಉತ್ತರ!

೧೯ – ೦೫ – ೧೯೬೦