ಎತ್ತಿ ಋತ್ವಿಕ್ಕರನು ಎಸೆ ಹೋಮಕುಂಡಕ್ಕೆ
ಅಷ್ಟಗ್ರಹಕೂಟ ದೋಷ ಪರಿಹಾರಕ್ಕೆ!
ಓ ಬೆಪ್ಪ,
ತುಪ್ಪವನು ಬೆಂಕಿಗೆಸೆಯಲು ಶಮನವಾಗುವೊಡೆ ಗ್ರಹದ ಪೀಡೆ
ಪುಷ್ಪನಪ್ಪಾ ಪುರೋಹಿತನನಾಹುತಿ ಮಾಡೆ
ಮತ್ತಷ್ಟು ಪರಿಹಾರ ದೊರೆಯದೇನ್ ಕೇಡೆ?
ಅಂದು ಫ್ರಾನ್ಸಿನ ಕ್ರಾಂತಿಕಾರ ದಿದೋರೆ
ದೊರೆ ಪುರೋಹಿತರ ಕುರಿತಾಡಿದಾ ಸೂಕ್ತಿ
ದಿಟವಾಗದಿದ್ದರೀ ಪೊಡವಿಗಿಹುದೇ ಮುಕ್ತಿ?
– “ಕೊನೆಯ ಪುರೋಹಿತನ ಕರುಳು
ಕೊನೆಯ ದೊರೆಯ ಕೊರಳಿಗುರುಳು
ಬಿಗಿಯದಿದ್ದರೆಲ್ಲಿ ತಿರುಳು
ಪೃಥ್ವೀ ಸ್ವಾತಂತ್ರ್ಯಕೆ?” –
ಮತ್ತೆ ಮತ್ತೆ ಹಿಡಿಸುತಿಹರು ಜನಕೆ ಮರುಳು:
ಅಷ್ಟಗ್ರಹ ದುಷ್ಟಗ್ರಹ ಭಯವತೋರಿ
ಅರಳ ಹೆಸರಿನಲ್ಲಿ ಮರಳ ಬೀರಿ
ಮಂಕು ಜನದ ಮನಕೆ ಮಾಡುತಿಹರು ಅರಳುಮರಳು!

೦೯ – ೦೧ – ೧೯೬೨