ನನ್ನ ಹೊಟ್ಟೆಗೆ ಹಂಡೆ ಹಾಲು ಹೊಯ್ದಂತಾಯ್ತು

ಕನ್ನಡದಿ ಸ್ವಾತಂತ್ರ್ಯಸಂದೇಶವನು ನೀವು
ಕೊಟ್ಟಿರೆಂಬುದನೊದಿ ಪತ್ರಿಕೆಯೊಳಿಂದು. ನಾವು
ಕನ್ನಡಿಗರಭಿಮಾನ ಶೂನ್ಯರೆಂಬುದು ಗೊತ್ತು:
ನಮ್ಮ ಹೆಮ್ಮೆಯ ಬರ್ಹಿಚೂಡವೊ, ಹೆರರ ಹೊರೆಹೊತ್ತು,
ನಮ್ಮ ದೌರ್ಬಲ್ಯವನೆ ಔದಾರ್ಯವೆಂಬವರ
ಹೊಗಳಿಕೆಗೆ ಬಾಯ್ವಿಟ್ಟು, ನಮ್ಮತನವನೆ ತೆತ್ತು,
ಕೆಂಬೂತ ಕುಣಿತ ಕುಣಿಯುವುದೆ!…. ಕನ್ನಡಿಗರಿರ,
ಕಲಿಯಿರೈ ತೆಲುಗು ತಮ್ಮಂದಿರಂ, ತಮಿಳ ಅಣ್ಣರಿಂ,
ಗೆಳೆಯರು ಮರಾಠರಿಂ, ಮಲೆಯಾಳಿ ಚಿಣ್ಣರಿಂ:
ನುಡಿ ನಿಮ್ಮ ಮೆಯ್ಯ ರಕ್ಷಿಸುವ ಖರ್ಪರ ಚರ್ಮ:
ಭಾವಿಸಿರೊ, ಪರಿಭಾವಿಸಿರೊ, ಕವಿಯ ಮಾತಿನ ಮರ್ಮ!
ಚರ್ಮವನೆ ಸುಲಿದ ಮೇಲಾವುದಿರುವುದು ರಕ್ಷೆ?
ನರಿ ನಾಯಿ ಕಾಗೆಗಳಿಗುಣಿಸಾಗುವುದೆ ಶಿಕ್ಷೆ!

೧೫ – ೦೮ – ೧೯೬೪


* ರಾಜ್ಯಪಾಲ ನಿಟ್ಟೂರು ಶ್ರೀನಿವಾಸರಾಯರು ಸ್ವಾತಂತ್ರೋತ್ಸವದ ದಿನದಂದು ಸೈನಿಕ ಗೌರವಾನಂತರ, ಮೊಟ್ಟಮೊದಲನೆಯ ಸಾರಿ, ಕನ್ನಡದಲ್ಲಿ ಸಂದೇಶವಿತ್ತ ಸುದ್ಧಿಯನ್ನೋದಿ.