ನಿನ್ನ ತಾಯಿಗಾಗಿ, ಮಗೂ,

ದಾರಿಬಿಟ್ಟು ದೂರ ಸರಿ:
ಹಿಂದೆ ನುಗ್ಗಿ ಬರುತಲಿದೆ
ಚಕ್ರಮಾರಿ
ಲಾ . . . . ರಿ! – – –

ಕುಡಿದಿರುವನೊ ಮುನಿದಿರುವನೊ
ಹಸಿದಿರುವನೊ ಸೊಕ್ಕಿರುವನೊ
ಆ ಚಕ್ರಧಾರಿ ಸಾರಥಿ?
ಯಾರ ಕೂಡೆ ಜಗಳವಾಡಿ
ಆಕ್ಸಿಲ್ರೇಟರ್ ಒತ್ತುತಿಹನೊ?
ಯಾರ ನೆನೆದು ಮೈಯ ಮರೆತು
ಯಂತ್ರಕಿಂತ ಯಂತ್ರವಾಗಿ
ತನ್ನ ಮನುಜತನವ ನೀಗಿ
ನುಗ್ಗುತಿಹನೊ ಡ್ರೈವರು:
ಬ್ರೇಕು ಸಮೆದು ಹಿಡಿಯದಿಹುದೊ?
ಬ್ರೇಕೆ ಇದೆಯೊ ಇಲ್ಲವೊ?
ಅಥವಾ ಬ್ರೇಕು ರುಪಾಯಾಗಿ
ಇನಿಸ್ಪೆಕ್‌ಟ್ರ ಜೇಬಿನಲ್ಲಿ
ಅಪಾಯವಿಲ್ಲದಿರುವುದೊ?

ನಿನ್ನ ತಾಯಿಗಾಗಿ, ಮಗೂ,
ದಾರಿಬಿಟ್ಟು ದೂರ ಸರಿ:
ಸ್ಕೂಲಿನಿಂದ ಬರುವನೆಂದು
ಕಾಫಿತಿಂಡಿಗಳನು ಮಾಡಿ,
ಕಾತರತೆಯ ಕಣ್ಣ ತೆರೆದು
ಬಾಗಿಲೆಡೆಯೆ ಹೊಸ್ತಿಲಲ್ಲಿ
ನಿಂತು ನಿನ್ನ ನಿದಿರುನೋಡಿ
ಹಾದಿ ಕಾಯುತಿರುವ ಆ
ನಿನ್ನ ತಾಯಿಗಾಗಿ, ಮಗೂ,
ದಾರಿಬಿಟ್ಟು ದೂರ ಸರಿ:
ಹಿಂದೆ ನುಗ್ಗಿ ಬರುತಲಿದೆ
ಚತುಶ್ಚಕ್ರ ಘೋರ ಮಾರಿ,
ಲಾಆಆಆ ರಿಈಈಈ!

೦೫ – ೦೪ – ೧೯೫೯