ಸಾಕಾಯಿತೆ ರಕ್ತಸ್ನಾನ?
ಇನ್ನಾದರು ಬುದ್ಧಿಯ ಕಲಿ, ಓ ಪಾಕಿಸ್ತಾನ!
ಹಿತವನೆ ನಿನಗೆಂದಾದರು ಆ ಪ್ರಾಚೀನ,
ರಾಕ್ಷಸ ತೃಷ್ಣೆಯ ಖಲ ಚೀನ?
ಕೊನೆಗೂ ನಿನಗೆ ಸಹೋದರ – ಹಿಂದೂಸ್ತಾನ!

ದ್ವೇಷಕೆ ಹುಟ್ಟಿದೆ; ದ್ವೇಷದಿ ಬೆಳದೆ;
ದ್ವೇಷವ ಸಾಧಿಸೆ ವೈರವ ತಳೆದೆ.
ಸರ್ವಾಧಿಕಾರಕೆ ಬಲಿಯಾದೆ;
ಸರ್ವ ಧಿಕ್ಕಾರದಿ ಕಲಿಯಾದೆ;
ಗರ್ವಕೆ ತುತ್ತಾದೆ;
ಲೋಕಕೆ ಕುತ್ತಾದೆ!

ಕಾಲ್ಕೆರೆದೆಯೆ ಕದನಕೆ ಬಂದೆ,
ಭರತನಂತೆ ಬಾಹುಬಲಿಯ ಮುಂದೆ!
ಎತ್ತಿ ನಿನ್ನನು ಕುಕ್ಕಿ
ಹೊಟ್ಟೆಪಚ್ಚಿಯ ಹೊರಡಿಸಬಹುದಿತ್ತು.
ಆದರೆ ಸೋದರ ಬಾಹುಬಲಿ
ಕ್ಷಮಾ ಔದಾರ್ಯದ ಧೀರಕಲಿ!
ಇನ್ನಾದರು ಹಿತವರಾರೆಂದು ತಿಳಿ:
ಇನ್ನಾದರು ಬದುಕು, ಬುದ್ಧಿಯ ಕಲಿ!
ಓ ಪಾಕಿಸ್ತಾನ,
ಸಾಕಾಯಿತೆ ರಕ್ತ ಸ್ನಾನ?

೨೩ – ೦೯ – ೧೯೬೫