೧
ಇಂಗಿಹೋಗುತಿದೆ ಇಂಗ್ಲೀಷಿನ ಮರುಭೂಮಿಯಲಿ
ನಿನ್ನ ಮಕ್ಕಳ ಶಕ್ತಿ – ಬುದ್ಧಿ – ಪ್ರತಿಭಾ;
ರಾಷ್ಟ್ರನಾಯಕ ಮನದಿ ವಿವೇಕರೂಪದಿ ಮೂಡಿ,
ಓ ರಸಮಯೀ ಸರಸ್ವತಿಯೆ, ಪೊರೆ ಬಾ!
೨
ಕಲ್ಲ ಕುಂಡದಿ ನೆಟ್ಟ ಅಶ್ವತ್ಥಸಸಿಯಂತೆ
ಕಿಮುಳ್ಚಿ ಗುಜ್ಜಾಗುತಿದೆ ಮೊಳೆವ ಚೈತನ್ಯ:
ಭೂಮಿಯಲಿ ಬೇರೂರಿ, ಬಾನೆಡೆಗೆ ತಲೆಯೆತ್ತಿ
ನಿಲುವವರಿಗೇತಕೀ ದಾಸ್ಯದೈನ್ಯ?
೩
ಗಾಂಧಿಯಿಂದಿಂಗ್ಲಿಷರ ದಾಸ್ಯದಿಂ ಪಾರಾದೆ;
ಅವನ ಕೊಂದಿಂಗ್ಲಷಿಗೆ ದಾಸಿಯಾದೆ.
ಓ ತಾಯಿ ಭಾರತಿಯೆ, ಚೀಣಿಯರನೆ ಮೀರಿ
ಹಿಂಡುತಿದೆ ಕಂದರನು ಇಂಗ್ಲಿಷಿನ ಮಾರಿ!
೪
ಬಲಾತ್ಕಾರಕಾಗಿ ಮಾತ್ರವೆ ಹೊರತು ಈ ರೋಷ,
ಭಾಷೆಗಾಗಿಯೆ ನಮ್ಮ ದ್ವೇಷವೇನಿಲ್ಲ;
ತೆಗೆಯಿರಿ ಬಲತ್ಕಾರದಂಶವನು; ಆರಿಸಲಿ
ಸರ್ವರೂ ಇಂಗ್ಲಿಷನೆ, ಚಿಂತೆ ಇನಿತಿಲ್ಲ.
೫
ಭಾವಜಲಮೂಲವನೆ ಹೀರುತಿದೆ ಮರುಭೂಮಿ,
ಹಿಂಡೆ ಜೀವವನು ಇಂಗ್ಲೀಷಿನ ಕಲ್ಗಾಣ;
ಕನ್ನಡದ ಕ್ರಿಸ್ತನದೊ ಇಂಗ್ಲಿಷಿನ ಶಿಲುಬೆಯಲಿ
ಸಿಲುಕಿ ಬಯ್ವಿಡುತಿಹನು ನೀರಡಸಿ ಪ್ರಾಣ!
೬
ತಮ್ಮವರು ಎಂತಿದ್ದರೂ ನುಸುಳಿ ಬರುವರು ಎಂಬ
ಕೆಚ್ಚಿನಲಿ, ಇಂಗ್ಲಿಸಿನ ಉಕ್ಕಿನ ಬಲೆಯನಿಕ್ಕಿ
ಜಾತಿಯಲಿ ಹಣದಲ್ಲಿ ಅಂತೆ ಅಧಿಕಾರದಲಿ
ಮೇಲೆ ಕುಳಿತವರೆಲ್ಲ ಮರೆಯುತಿರುವರು ಸೊಕ್ಕಿ!
೭
ಹೆಣಭಾರ! ಹೆಣಭಾರ! ಸಾಕೀ ಬಲಾತ್ಕಾರ;
ಸಾಕು ನಿಲ್ಲಿಸಿ, ನಿಮಗೆ ಬೇಕಾದರುದ್ದಾರ.
ಇಂಗ್ಲಿಷಿನ ಚಪ್ಪಡಿಯಡಿಯ ಹಸುಳೆಚೀತ್ಕಾರ
ಕೇಳಿಸದ ಕಿವುಡರಿರ, ನಿಮಗೇಕೆ ಅಧಿಕಾರ?
ಕೇಳಿಯೂ ಧಿಮ್ಮನಿರೆ, ಕೋಟಿ ಧಿಕ್ಕಾರ!
೮
ಬೇಕಾದರಿಗೆ ಕೊಡಿರೊ, ಬೇಡವೆಂದವರಾರೊ?
ಹೇರಿ ಎಲ್ಲರ ಮೇಲೆ ಕೊಲೆಗೈವರೇಕೊ? –
ಓ ಕಂದ, ಓ ತರುಣ, ಓ ಯುವಕ ಭಾರತೀಯ,
ಮೇಲೆ ಕುಳಿತವರಿಕ್ಕಿದುಕ್ಕುಬಲೆಯನು ಕಿತ್ತು,
ನಿನ್ನ ಸ್ವಾತಂತ್ರ್ಯವನು, ಓ, ನೀನೆ ರಕ್ಷಿಸಿಕೊ!
೯
ಇಂಗ್ಲಿಷಿನ ಜಿಲೊಟಿನ್ನಿನಡಿ ನಿಮ್ಮ ಕೊರಳೊಡ್ಡಿ
ವರಷವರುಷವು ಕೋಟಿ ಕೊಲೆಯಪ್ಪಿರೇಕೆ?
ನಿಮ್ಮ ಶಕ್ತಿಯ ಕುಂದದಲ್ಲ ಕಾರಣ ಕೊಲೆಗೆ:
ಪರಭಾಷೆ ಚಪ್ಪಡಿ! ಪರೀಕ್ಷೆಯ ನೆವಂ ಬೇಕೆ? –
ಏಳು ಎಚ್ಚರಗೊಳ್ಳು ಓ ಭಾರತಿಯ ಕಂದ,
ನಿನ್ನ ಸ್ವಾತಂತ್ರ್ಯವನು, ನೀನೆ ರಕ್ಷಿಸಿಕೊ!
೦೯ – ೦೪ – ೧೯೬೩
Leave A Comment