ಬಾ ಇಲ್ಲಿ, ಬಾ ಇಲ್ಲಿ; ಕನ್ನಡಿಗ ಬಾ ಇಲ್ಲಿ:
ಮೈಮೆಯನು ಕಂಡರಿಯದಿಹ ನೀನು, ನೋಡದರ
ಹುಳು ಹಿಡಿದ ಹೆಣವನಾದರು, ನೋಡು ಬಾ ಇಲ್ಲಿ!
ಮಸಣದಲಿ ಜಾನಿಪೊಡೆ, ಸಾಧಕನೆ, ಬಾ ಇಲ್ಲಿ:
ಹಂಪೆಯಿದು ಕಲಿಯುಗದ ಹಸಿಯ ಹಿರಿಮಸಣ!
ಕನ್ನಡಾಂಬೆಯ ಮುಡಿಯು ಸಿಡಿದು ಒಡೆದುದು ಇಲ್ಲೆ:
ನಿನಗೆ ಕಂಬನಿ ಇದೆಯೆ? ಕಬ್ಬಿಗನೆ, ಸುರಿಸು ಬಾ.
ಕಾಶಿಗೇತಕೆ ಹೋಗುತಿಹೆ, ಯಾತ್ರಿಕನೆ ನೀನು?
ಹಂಪೆ ತೆಂಕಣ ಕಾಶಿ: ಬೀರದಿಂ ಪುಡಿಪುಡಿಯೂ
ಮರಣದಿ ಪವಿತ್ರತರವಾದ ಕಾಶಿಯಿದು ಕೇಳ್.
ಯೋಗಿ ವಿದ್ಯಾರಣ್ಯನಡಿಯ ಪುಡಿ ಇಹುದಿಲ್ಲಿ:
ಮೃತ್ಯು ಪಾವನಗೈದ ಶುಭತರಕ್ಷೇತ್ರವಿದು!
ಪಾಳಾದ ಕನ್ನಡಾರಾಮವಿದು! ಕನ್ನಡಿಗ
ಯಾತ್ರಿಕನೆ, ಬಾ ಇಲ್ಲಿ! ಬೇಡುವೆನು, ಬಾ ಇಲ್ಲಿ!
ಹಂಪೆಯ ವಿರೂಪಾಕ್ಷ ಭಕ್ತರನೆದುರು ನೋಡಿ
ಕಂಬನಿಯ ಸೂಸುತಿಹನಿಲ್ಲಿ; ಬಾ ಇಲ್ಲಿ!
ಏಕಾಂಗಿಯಾಗಿಹನು! ಅಯ್ಯೊ ಬೇಸತ್ತಿಹನು
ಭಗವಂತ! ಓಡಿ ಬಂದಪ್ಪುವನು ಭಕ್ತನನು!
ಬಾ, ಇಲ್ಲಿ ಬಾ! ಬಾ, ಇಲ್ಲಿ ಬಾ!

೦೯ – ೦೪ – ೧೯೨೯