ಹಾಡು, ನೇಗಿಲಯೋಗಿ:

ಗೊಬ್ಬರಕೆ ಮಿಗಿಲಾಗಿ
ಹಾಡೆ ಫಲವತ್ತಾಗಿ
ಹುಲುಸು ಬೆಳೆವುದು ರಾಗಿ!
ಹಾಡು, ನೇಗಿಲಯೋಗಿ!

ಹಾಡು, ನೇಗಿಲಯೋಗಿ:
ಹಾಡೆ ಹದಗೆಂಪಾಗಿ
ಹಲದ ಕುಳ ಹರಿತಾಗಿ
ಹೊಲದ ಹೃದಯಕೆ ತಾಗಿ
ದಯೆ ಚಿಮ್ಮುವುದು ರಾಗಿ:
ಹಾಡು, ನೇಗಿಲಯೋಗಿ!

ಹಾಡು, ನೇಗಿಲಯೋಗಿ:
ಎತ್ತಿಗುಲ್ಲಸವಾಗಿ
ದುಡಿಮೆ ಇಮ್ಮಡಿಯಾಗಿ
ಕಣಜ ಕಿಕ್ಕಿರಿಯಾಗಿ
ನೀನಾಗುವೈ ಭೋಗಿ:
ಹಾಡು, ನೇಗಿಲಯೋಗಿ!

೩೦ – ೦೫ – ೧೯೪೮