ನಿನಗೆ ಹಮ್ಮೆಯೆ, ಹಿಮಗಿರಿ?

ಗೌರಿಶಂಕರ ಮತ್ತು ಧವಳಗಿರಿ
ಲೋಕದ ಮಹೋನ್ನತ ಶಿಕರಗಳನಾಂತ ಶಿಖರಿ
ಎಂದು ಹೆಮ್ಮೆಯೆ, ಹಿಮಗಿರಿ?
ಅಂದು
ನಿನ್ನ ನೆತ್ತಿಯ ಮೆಟ್ಟನೆ?
ಆ ಷರ್ಪನೆ
ವಿನಯದೋಲೆಯ ಕಟ್ಟನೆ? –
ಸಾಲದೇ?

ಚೀಣಿಯರ ಕೈಯಿಂದ
ನಿನ್ನ ರಕ್ಷಿಸಲಿಂದು ಬೇಕಾಯ್ತು ಸಹ್ಯಾದ್ರಿ!
ನಿನಗೆ ಕೋಡೆರಡುಂಟೆ
ಮೇಘಚುಂಬಿ?
ನನಗು ಕೋಡೆರಡುಂಟು
ಗಗನ ಚುಂಬಿ!
ಹೆಸರುಗಳನೂ ಹೇಳಬೇಕೆ
ತಿಳಿದಿರಲು ಸಕಲ ಲೋಕಕ್ಕೆ?
ಅದು ವಿನಯವೂ ಅಲ್ಲ;
ಕವಿಸಮಯವೂ ಅಲ್ಲ;
ಧ್ವನಿಗೆ ವಾಚ್ಯದ ಊರೆ ಏಕೆ? –
ಸಾಕೆ?

೧೫ – ೧೨ – ೧೯೫೯


* ಯುವಜನೋತ್ಸವ ಶಿಬಿರಕ್ಕೆ ಭೇಟಿಕೊಟ್ಟ ಮಹಾಸೇನಾನಿ ಜ|| ತಿಮ್ಮಯನವರ ಗೌರವಾರ್ಥವಾಗಿ.