ಜಿಲ್ಲೆಯ ಕಲೆಕ್ಟರನ ಮನೆ. ಕಲೆಕ್ಟರ್ ತನ್ನ ಕಛೇರಿಯಲ್ಲಿ ಧನಪತರಾಯ್ ಶ್ರೀವಾಸ್ತವನೊಡನೆ ಚಹ ಕುಡಿಯುತ್ತ ಮಾತನಾಡುತ್ತಿದ್ದ.

“ಧನಪತರಾಯ್ ಶ್ರೀವಾಸ್ತವ್! ಬಾ, ಇಗೋ ಈಚೆಗೆ ಬಂದಿರುವ ಈ ಪುಸ್ತಕ ಓದಿರುವೆಯಾ? ಯಾರೋಈ ಪ್ರೇಮಚಂದ್ ನಂತೆ. ಎಷ್ಟು ಚೆನ್ನಾಗಿ ಬರೆದಿದ್ದಾನೆ! ನೀನು “ನವಾಬ್ ರಾಯ್” ಎಂದು ಹೆಸರಿಟ್ಟುಕೊಂಡು ಬರೆದ ಆ ಪುಸ್ತಕ “ಸೋಜೋ ವತನ್” (ದೇಶದ ಕಿಡಿಗಳು) ಅಲ್ಲವೇ? ಏನು, ಏಳುನೂರು ಪ್ರತಿಗಳನ್ನು ಸರ್ಕಾರ ಮುಟ್ಟು ಗೋಲು ಹಾಕಿತು ಎಂದೆಯಲ್ಲ! ಹಾಗೇಕೆ ಬರೆಯಬೇಕು? ಸರ್ಕಾರದ ಕೋಪಕ್ಕೆ ತುತ್ತಾಗಬೇಕು? ಅದೇ ನೋಡು! ಈ ಪ್ರೇಮಚಂದ್ ಎಷ್ಟು ಸೊಗಸಾಗಿ ದೇಶಪ್ರೇಮದ ಚಿತ್ರಣ ಮಾಡಿದ್ದಾನೆ. “ಸಮರ ಯಾತ್ರಾ” -ಜನರ ಮನೋಭಾವವನ್ನು ಯಥಾವತ್ತಾಗಿ ಚಿತ್ರಿಸುವ ಕಥೆ. ಈ ಸಂಗ್ರಹದ ಕಥೆಗಳೆಲ್ಲ ಸೊಗಸಾಗಿವೆ.”

ಅವನೊಡನೆ ಸಂಭಾಷಣೆ ಸಾಧ್ಯವಾಗಿದ್ದರೆ-“

ಅವನು ಮಾತನ್ನು ಮುಂದುವರಿಸುತ್ತಾ ಹೇಳಿದ : “ಶ್ರೀ ವಾಸ್ತವ್! ನಿಜಕ್ಕೂ ಈ ಪ್ರೇಮಚಂದ್ ದೊಡ್ಡ ಚೇತನ. ಆತನೊಡನೆ ಸಂಭಾಷಣೆ ಮಾಡಲು ಸಾಧ್ಯವಾದರೆ ಅದೇ ಒಂದು ಹೆಮ್ಮೆ ಮತ್ತು ಅಭಿಮಾನದ ವಿಷಯ ಗೊತ್ತೆ! ಈ ಲೇಖಕನೇನಾದರೂ ನಮ್ಮ ಇಂಗ್ಲೆಂಡಿನಲ್ಲಿದಿದ್ದರೆ  ಆ ವಿಷಯವೇ ಬೇರೆ! ಅವನ ಕೀರ್ತಿ ದಿಗ್ ದಿಗಂತಕ್ಕೆ ಹರಡುತ್ತಿತು.” ಹೀಗೆ ಪ್ರಶಂಸೆಯ ಸುರಿಮಳೆ ಗೆರೆಯುತ್ತಾ, “ನೀನು ಲೇಖಕನಾಗಲು ಹೊರಟು ಮುಖಭಂಗ ಮಾಡಿಸಿಕೊಂಡೆ. ಸರ್ಕಾರದ ಕೋಪಕ್ಕೆ ಗುರಿಯಾದೆ. ನಿನ್ನ ಬರವಣಿಗೆ ನಿಂತುಹೋಯಿತೆ? ಛೇ! ಹಾಗೆ ಮಾಡಬಾರದಿತ್ತು. ಬರೆಯುವ ಕಲೆ ಸಾಮನ್ಯವಲ್ಲ. ಯಾರನ್ನೂ ಕೆಣಕದಂತೆ ಬರೆಯುವುದನ್ನು ಅಭ್ಯಾಸ ಮಾಡಬೇಕಿತ್ತು.” ಎಂದು ಹೇಳಿ ಕಲೆಕ್ಟರನು ಧನಪತ್ ರಾಯ್ ಶ್ರೀ ವಾಸ್ತವನ ಕೈಕುಲುಕಿ ಬೀಳ್ಕೊಟ್ಟ.

ಧನಪತ್ ರಾಯ್ ಶ್ರೀ ವಾಸ್ತವನೇ ಈಗ “ನವಾಬ್ ರಾಯ್” ಎಂಬ ಹೆಸರನ್ನು ಬಿಟ್ಟು “ಪ್ರೇಮಚಂದ್” ಎಂಬ ಹೆಸರಿನಿಂದ ಬರೆಯುತ್ತಿದ್ದಾನೆ.  “ಪ್ರೇಮಚಂದ್ ನೊಡನೆ ಸಂಭಾಷಣೆ ಮಾಡಲು ಸಾಧ್ಯವಾದರೆ ಅದೇ ಒಂದು ಹೆಮ್ಮೆ ಮತ್ತು ಅಭಿಮಾನದ ವಿಷಯ” ಎಂದು ತಾನು ಹೇಳುತ್ತಿರುವ ಮಾತುಗಳನ್ನು ಕೇಳುತ್ತ ಕುಳಿತಿರುವ ಮನುಷ್ಯನೇ ಪ್ರೇಮಚಂದ್ ಎಂದು ಕಲೆಕ್ಟರನಿಗೆ ಗೊತ್ತಾಗಲಿಲ್ಲ.

ನವಾಬ್ ರಾಯ್

ಆ ಕಲೆಕ್ಟರನಿಗೆ ಧನಪತ್ ರಾಯ್ ಶ್ರೀವಾಸ್ತವನೇ ನವಾಬ್ ರಾಯ್ ಎಂಬ ಅಂಕಿತದಿಂದ ಬರೆಯುವನೆಂಬುದು ಗೊತ್ತಿತ್ತು. ೧೯೧೪ ರಲ್ಲಿ ಗುಪ್ತಚರರ ವರದಿಯ ಆಧಾರದ ಮೇಲೆ ಸರ್ಕಾರವು ಶ್ರೀವಾಸ್ತವನು ಬರೆದ “ಸೋಜೇ ವತನ್” ಎಂಬ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡಾಗ ಧನಪತ್ ರಾಯ್ ನನ್ನು ತನ್ನ ಆಫೀಸಿಗೆ ಬರಮಾಡಿಕೊಂಡು  ಆ ಸಾಹೇಬ್ ವಿಚಾರಿಸಿದ್ದ. ಎಲ್ಲ ಕಥೆಯ ಸಾರಾಂಶವನ್ನು ಕೇಳಿದ್ದ. ಆನಂತರ ಕೋಪದಿಂದ, “ನೀನು ಬ್ರಿಟಿಷ್ ಸರ್ಕಾರಕ್ಕೆ ದ್ರೋಹ ಮಾಡಿದ್ದಿ?” ಎಂದು ಕೂಗಾಡಿದ್ದ ಮತ್ತು “ದೇಶದ್ರೋಹ ಹಾಗೂ ರಾಜದ್ರೋಹಕ್ಕೆ ಕಾರಣವಾಗುವಂತಹ ಬರಹವನ್ನು ಬರೆಯುವುದಿಲ್ಲ” ಎಂದು ಹೇಳಿಸಿ ಕೈಬಿಟ್ಟಿದ್ದ. ವಾಸ್ತವವಾಗಿ ನೋಡಿದರೆ “ಸೋಜೇ ವತನ್” ಮೊದಲು ಪ್ರಕಾಶಿತವಾದದು ೧೯೦೭ ರಲ್ಲಿ ಅದನ್ನು ಬರೆದದ್ದು ಉರ್ದು ಭಾಷೆಯಲ್ಲಿ.

ಪ್ರೇಮಚಂದ್ ರ ಮೊದಲನೆಯ ಕಥೆಯಲ್ಲಿ ಒಂದು ಪ್ರಶ್ನೆ ಬರುತ್ತದೆ: ಈ ಪ್ರಪಂಚದಲ್ಲಿ ಅತ್ಯಮೂಲ್ಯವಾದ ವಸ್ತು ಯಾವುದು? ಮಗನು ಕೊಲೆಯಾದಾಗ ತಂದೆ ಸುರಿಸುವ ಕಣ್ಣೀರೇ? ಗಂಡನ ಚಿತೆಗೆ ಹಾರಿ ಪ್ರಾಣಕೊಟ್ಟ ಮಹಾಸಾಧ್ವಿಯ ಚಿತಾಭಸ್ಮವೇ? ಇವು ಪವಿತ್ರವೇ ಅದರೂ, ಇವಕ್ಕಿಂತ ಪವಿತ್ರವಾದವು “ದೇಶದ ಸ್ವಾತಂತ್ರ್ಯಕ್ಕಾಗಿ ಸುರಿಸಿದ ರಕ್ತದ ಕಡೆಯ ಹನಿ” ಇಂತಹ ಭಾವನೆಯ ಕಥೆಯನ್ನು ಕೇಳಿ ಬಿಳಿಯ ಅಧಿಕಾರಿ ಸಿಟ್ಟಿಗೆದ್ದದ್ದೂ ಆಶ್ಚರ್ಯವಲ್ಲ.

“ಸೋಜೇ ವತನ್” ಕಥಾಗುಚ್ಚದ ಅನುವಾದ ೧೯೧೧೪ ರಲ್ಲಿ ಹಿಂದೀ ಭಾಷೆಯಲ್ಲಿ ಆಯಿತು. ಸರ್ಕಾರ ಮುಟ್ಟುಗೋಲು ಹಾಕಿತು. ಲೇಖಕನಿಗೆ ಬಹುಮಾನದ ಬದಲು ಛೀಮಾರಿ ಹಾಕಲಾಗಿತ್ತು.

ಪ್ರೇಮಚಂದ್ಕಾಣಿಸಿಕೊಂಡ

ಅಂದೇ ಆ ಲೇಖಕ ನವಾಬ್ ರಾಯ್ ಕಣ್ಮರೆಯಾದ. ಅಂದಿನಿಂದ “ಪ್ರೇಮಚಂದ್” ಹಿಂದೀ ಭಾಷೆಯಲ್ಲಿ ಬರೆಯತೊಡಗಿದ. ಅವನ ಕಥೆಗಳು ಜನಾದರಣೀಯವಾದವು. ಇಂಗ್ಲೀಷ್ ಭಾಷೆಗೆ ಕಥೆಗಳ ಅನುವಾದವಾದವು. ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವು. ಸಹೃದಯನಾದ ಕಲೆಕ್ಟರನ ಮೆಚ್ಚುಗೆಯನ್ನು ಪಡೆದವು. ನವಾಬ್ ರಾಯ್ ನಲ್ಲಿದ್ದ ಬರೆಯುವ ಚೈತನ್ಯವನ್ನು ಗುರುತಿಸಿದ್ದ ಕಲೆಕ್ಟರ್ ಪ್ರೇಮಚಂದ್ ಬರಹಕ್ಕೆ ಮೆಚ್ಚಿಗೆ ಸೂಚಿಸಿ ತನ್ಮೂಲಕ ನವಾಬ್ ರಾಯ್ ಸಹ ಉತ್ತಮ ಕೃತಿಗಳನ್ನು ಬರೆಯುವಂತೆ ಮಾಡಬೇಕೆಂದು ಹವಣಿಸಿದ್ದ.

ಪ್ರೇಮಚಂದ್ ತನ್ನ ಹೊಗಳಿಕೆಗೆ ಹಿಗ್ಗದೇ ನವಾಬ್ ರಾಯ್ ನನ್ನು ಕುರಿತು ತೆಗಳಿ ಆಡಿದ ಮಾತಿಗೆ ಕುಗ್ಗದೆ ಗಂಭೀರನಾಗಿದ್ದ.

ಬಡತನದ ಬಾಲ್ಯ

ಸಮುದ್ರದಂತೆ ಗಂಭಿರವಾದ ವ್ಯಕ್ತಿತ್ವ ಪ್ರೇಮಚಂದ್ ರದು. ಬಾಲ್ಯದಿಂದಲೇ ಅದು ಕಾಣುತ್ತಿತ್ತು. ಅವರು ಹುಟ್ಟಿದ್ದು ವಾರಣಾಸಿ ಸಮೀಪದಲ್ಲಿದ್ದ ಲಮಹೀ ಎಂಬ ಗ್ರಾಮದಲ್ಲಿ ೧೮೮೦ ನೇ ಜುಲೈ ಕೊನೆಯ ದಿನ. ಶ್ರೀವಾಸ್ತವ್ ಎಂಬುದು ಬರಹಗಾರರಿಗೆ ಹೆಸರಾದ ವಂಶ. ಸಾಮಾನ್ಯವಾಗಿ ಮುಗಲ್ ಕೋರ್ಟ್ ಕಛೇರಿಗಳಲ್ಲಿ ಈ ವಂಶದವರು ಗುಮಾಸ್ತರಾಗಿರುತ್ತಿದ್ದರು. ಪ್ರೇಮಚಂದ್ ರ ತಂದೆಯವರು ಮುನ್ಷಿಯಾಗಿದ್ದರು. ಮುನ್ಷಿ ಎಂದರೆ ಗುಮಾಸ್ತ ಎಂದರ್ಥ. ಮೊಗಲ್ ಸಂಸ್ಕೃತಿಯ ಪಡಿನೆಳಲು ಈ ಪರಿವಾರದ ಮೇಲೆ ಸಹಜವಾಗಿಯೇ ಬಿದ್ದಿತ್ತು. ಉಡುಗೆ-ತೊಡುಗೆಯಾದಿ ಎಲ್ಲದರಲ್ಲೂ ಇಸ್ಲಾಂ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿದ್ದ ಪ್ರೇಮಚಂದ್ ರ ಮನೆತನ ಹಿಂದೂ ಮುಸ್ಲಿಂ ಸಂಸ್ಕೃತಿಯ ಸಾಮರಸ್ಯಕ್ಕೊಂದು ಉದಾಹರಣೆ ಎನ್ನುವಂತಿತ್ತು.

ಇಂತಹ ವಂಶದಲ್ಲಿ ಬಂದ ಪ್ರೇಮಚಂದ್ ರ ಜೀವನವಾದರೋ ಬಡತನದಲ್ಲಿ ರೂಪುಗೊಂಡಿತ್ತು. ತಂದೆಯವರು ಅಂಚೇ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ಅವರಿಗೆ ಬರುತ್ತಿದ್ದುದು ತಿಂಗಳಿಗೆ ಇಪ್ಪತ್ತು ರೂಪಾಯಿಗಳು ಮಾತ್ರ. ಈ ಅಲ್ಪ ಸಂಬಳದಲ್ಲಿ ಮಕ್ಕಳಿಗೆ ಹೇಗೆ ತಾನೆ ತೃಪ್ತಿಯಾಗುವಷ್ಟು ತಿಂಡಿ ತಿನಿಸುಗಳನ್ನಾಗಲೀ ಬಟ್ಟೆ ಬರೆಯನ್ನಾಗಲೀ ಒದಗಿಸಲು ಸಾಧ್ಯವಾದೀತು? “ಒಂದು ಗಾಳಿಪಟವನ್ನು ಕೊಂಡು ತಂದು ಹಾರಿಸುವಷ್ಟೂ ಕೈಗೆ ಕಾಸು ಸಿಕ್ಕುತ್ತಿರಲಿಲ್ಲ. ಯಾರದ್ದಾದರೂ ಗಾಳಿಪಟ ಹರಿದು ಹಾರಿಹೋದರೆ ಅದನ್ನು ಹಿಂಬಾಲಿಸಿ ಹೋಗಿ ತರುತ್ತಿದ್ದೆ” ಎಂದು ಪ್ರೇಮಚಂದ್ ರು ಹೇಳಿಕೊಂಡಿದ್ದಾರೆ.

ಅವಿಭಕ್ತ ಕುಟುಂಬ

ಒಂದೂವರೆ ರೂಪಾಯಿ ಬಾಡಿಗೆ ಮನೆಯಲ್ಲಿ ಕುಟುಂಬದವರೆಲ್ಲ ವಾಸವಾಗಿದ್ದರು. ಅದೊಂದು ಅವಿಭಕ್ತ ಕುಟುಂಬ. ಈ ಅವಿಭಕ್ತ ಕುಟುಂಬದ ಬಗ್ಗೆ ನಿಜಕ್ಕೂ ಪ್ರೇಮಚಂದ್ ಅದರ ಭಾವವನ್ನು ಹೊಂದಿದ್ದರು. ಇದೇ ಅವರ ಆದರ್ಶವಾಗಿದ್ದೆತೆಂದರೂ ತಪ್ಪಲ್ಲ. ಏಕೆಂದರೆ ಅವರ ಸಾಹಿತ್ಯದಲ್ಲಿ ಅವಿಭಕ್ತ ಕುಟುಂಬದ ಪದ್ಧತಿಯ ಸಮರ್ಥನೆ ದೊರೆಯುತ್ತದೆ. “ಬಡೇ ಘರ್ ಕೀ ಬೇಟೀ” ಎಂಬ ಕಥೆಯಲ್ಲಿ ಅಣ್ಣ ತಮ್ಮಂದಿರ ಮನಸ್ತಾಪ ಆಗುತ್ತದೆ. ತಮ್ಮ, ಮನೆಬಿಟ್ಟು ಬೇರೆ ಹೋಗಬೇಕು ಇಲ್ಲವೇ, ತಾನೇ ಬೇರೆ ಹೊರಟು ಹೋಗುವುದಾಗಿ ಹಟ ತೊಟ್ಟ ಸುಶಿಕ್ಷಿತ ಪದವೀಧರ ಶ್ರೀ ಕಂಠನ ನಿಷ್ಠೂರ ಮಾತುಗಳನ್ನು ಕೇಳಿ ಅವನ ತಂದೆ ಬಹು ದುಃಖಿತರಾಗಿರುತ್ತಾರೆ. ಆಗ ಶ್ರೀಕಂಠನ ಹೆಂಡತಿ ಗಂಡನಿಗೆ ಬುದ್ಧಿ ಹೇಳಿ ಮೈದುನನ್ನು ಸಂತೈಸಿ ಒಡೆದುಹೋಗಲಿದ್ದ ಮನೆಯನ್ನು ಒಂದುಗೂಡಿಸುತ್ತಾಳೆ. ಎಷ್ಟೇ ಆಗಲಿ ದೊಡ್ಡ ಮನೆತನದ ಹೆಣ್ಣೂ ಎಂದು ಎಲ್ಲರ ಮೆಚ್ಚುಗೆಗೂ ಪಾತ್ರಳಾಗುತ್ತಾಳೆ. ಅದೇ ಆದರ್ಶ ಒಡೆದು ಚೂರಾದಾಗ ಎಷ್ಟು ಅನರ್ಥವಾಗುವುದೆಂದು ತೋರಿಸುವ ದಾರುಣ ಚಿತ್ರವನ್ನು ಪ್ರೇಮಚಂದ್‌ರ ಕೊನೆಯ ಕಾದಂಬರಿ “ಗೋದಾನ್” ನಲ್ಲಿ ನೋಡಬಹುದು ಬೇರೆ ಮನೆ ಹೂಡಿದಾಗ ಏನೋ ಅಪಮಾನವಾಯಿತೆಂದು ಬಗೆದು ಹಳ್ಳಿಯಲ್ಲಿ ಮುಖ ಮರೆಸಿಕೊಂಡು ಕೆಲವು ದಿನ ಕಾಲ ಕಳೆಯುತ್ತಾನೆ.

ತಾಯಿ

ಇನ್ನೂ ಎಂಟು ವರ್ಷದ ಆಲಕನಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ಪ್ರೇಮಚಂದ್ ಏಕಾಂತದಲ್ಲಿದ್ದು ಸದಾ ಚಿಂತನ ಮಂಥನದಲ್ಲಿ ಕಾಲ ಕಳೆಯುವ ಪ್ರವೃತ್ತಿಯನ್ನು ಬೆಳಸಿಕೊಂಡಿದ್ದರು. ಸಾಲದುದಕ್ಕೆ ತಂದೆಯವರು ಎರಡನೆಯ ಮದುವೆ ಬೇರೆ ಮಾಡಿಕೊಂಡರು. ಆಗ ಪ್ರೇಮಚಂದ್ ರ ಎಳೆಯ ಹೃದಯ ತಾಯಿಯ ಪ್ರೇಮವನ್ನು, ಅದರ ಮಹತ್ವವನ್ನು ಮತ್ತಷ್ಟು ಮನಗಾಣಲು ಕಾರಣವಾಯಿತು. ಈ ಮಾತೃಪ್ರೇಮದ ಆದರ್ಶವನ್ನು ಅವರು ತಮ್ಮ ಸಾಹಿತ್ಯದಲ್ಲಿ ಚಿತ್ರಿಸಿದ್ದಾರೆ. ಹೆಣ್ಣೆಂದರೆ ಅವರ ಪಾಲಿಗೆ ಮಾತೆ-ಆ ಕಾರಣ ಪೂಜ್ಯೆ. ಮಮತೆಯ ಸುಳಿಯಲ್ಲಿ ಸಿಕ್ಕ ತಾಯಿ ಹೂವಿನಂತೆ ಮೃದುವಾಗಿರುತ್ತಾಳೆ; ಆದರೆ ಮಗುವಿನ ಭವಿಷ್ಯವನ್ನು ರೂಪಿಸಲು ಅಗತ್ಯವಾದಾಗ ವಜ್ರದಂತೆ ಕಠೋರಳೂ ಆಗುತ್ತಾಳೆ. ಇಂತಹ ಮಾತೆಯ ಮೂರ್ತಿಯನ್ನು ಬಿಟ್ಟು ಹೆಣ್ಣಿನ ಚಿತ್ರವನ್ನು ಬಣ್ಣಿಸುವುದು ಪ್ರೇಮಚಂದ್ ರ ಪ್ರವೃತ್ತಿಗೆ ಒಗ್ಗಿ ಬಂದಿಲ್ಲ.

ಬೆನ್ನು ಮುರಿಯುವ ಹೊರೆ

ಪ್ರೇಮಚಂದ್ ಗೆ ಹದಿನೈದು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ತಿರಿಕೊಂಡು ಮಲತಾಯಿ ಮತ್ತು ಇಬ್ಬರು ಚಿಕ್ಕ ಸಹೋದರರ ಭಾರ ಪ್ರೇಮಚಂದ್ ರ ಮೇಲೆ ಬಿತ್ತು.

ಆ ವಯಸ್ಸಿನಲ್ಲಾಗಲೇ ಅವರಿಗೆ ಮದುವೆ ಬೇರೆ ಆಗಿತ್ತು. ಆಗಿನ ಕಾಲದ ಮದುವೆ ಎಂದರೆ ಹೆಣ್ಣು ಗಂಡಿನ ಒಪ್ಪಿಗೆಯನ್ನಾರು ಕೇಳುತ್ತಿದ್ದರು? ಪ್ರೇಮಚಂದ್ ರ ತಂದೆ ಮಲತಾಯಿಯ ತಂದೆ ಇಬ್ಬರೂ ಸೇರಿ ಸಮ್ಮತಿಸಿ ಈ ಮದುವೆ ಮಾಡಿದ್ದರು. ಪ್ರೇಮಚಂದ್ ಹೇಳುವಂತೆ ಆ ಹೆಣ್ಣು ಚೆನ್ನಾಗಿರಲಿಲ್ಲ. ಸುಂದರಿಯಾಗಿರಲಿಲ್ಲ. ಅಷ್ಟೇ ಅಲ್ಲ. ಅವಳ ಸ್ವಭಾವವೂ ನಯವಲ್ಲ. ಮನೆಯವರು ಅವಳನ್ನು ಎಷ್ಟೆಷ್ಟು ಸಮಾಧಾನಪಡಿಸಿ ಸಂಸಾರವನ್ನು ಸಂತೋಷವಾಗಿ ನಡೆಸಲು ಯತ್ನಿಸಿದರೆ, ಅಷ್ಟಷ್ಟೂ ಅವಳು ದೂರ ದೂರ ಸರಿಯಲು ಯತ್ನಿಸುತ್ತಿದ್ದಳು. ಕೊನೆಗೆ ಜಗಳವಾಡಿಕೊಂಡು ತೌರು ಮನೆಗೆ ಹೊರಟು ಹೋದಳು ಅವಳಿಗೆ ಜೀವನಾಂಶವನ್ನು ಕೊಡುವ ಹೊಣೆಗಾರಿಕೆಯೂ ಪ್ರೇಮಚಂದ್ ರದಾಯಿತು.

ಆರ್ಥಿಕ ಮುಗ್ಗಟ್ಟು, ಪರಿಸ್ಥಿತಿ ಒತ್ತಡ, ಜವಬ್ದಾರಿ ಈ ಎಲ್ಲದರ ಪರಿಣಾಮವಾಗಿ ಪ್ರೇಮಚಂದ್ ರ ಜೀವನದಲ್ಲಿ ಸಂತೋಷದ ಕನಸು ಕಾಣುವ ಸಾಧ್ಯತೆಯೇ ಇರಲಿಲ್ಲ. ಏನಿದ್ದರೂ ಕರ್ತವ್ಯ ಪ್ರಜ್ಞೆ, ಕರ್ತವ್ಯ ನಿಷ್ಠೆ ಇವನ್ನು ಪಾಲಿಸಿಕೊಂಡು ಬಂದರು. ಇದೇ ಆದರ್ಶವನ್ನು ತಮ್ಮ ಬರಹದಲ್ಲಿ ಎತ್ತಿ ಹಿಡಿದರು. ಜೀವನದಲ್ಲಿ ನಿರಂತರ ಹೋರಾಡುವ ಕಲಿಯಾಗಿ ಬಾಳಬೇಕೆಂಬ ಆದರ್ಶ ಚಿತ್ರವನ್ನು “ಹೋರಿ” ಪಾತ್ರದ ಮೂಲಕ “ಗೋದಾನ್” ಎಂಬ ಕಾದಂಬರಿಯಲ್ಲಿ ಮೂಡಿಸಿದ್ದಾರೆ. ಈ ಬಗೆಯ ಆದರ್ಶ ನಿರೂಪಣೆಯನ್ನು ಅವರ ಕಥೆಗಳಲ್ಲೂ ನೋಡಬಹುದಾಗಿದೆ.

ಅಧ್ಯಾಪಕ

೧೯೦೪ ರಲ್ಲಿ ದ್ವೀತಿಯ ಶ್ರೇಣಿಯನ್ನು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರೇಮಚಂದ್ ಕಾಲೇಜಿಗೆ ಹೋಗಿ ಕಲಿಯಬೇಕೆಂಬ ಹಂಬಲವನ್ನು ತೊರೆಯಬೇಕಾಗಿ ಬಂತು. ಈ ಮೆಟ್ರಿಕ್ ಓದುವಾಗ ಹೊಟ್ಟೆಗೆ ಸರಿಯಾಗಿ ಅನ್ನವಿಲ್ಲದೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ ತಿಂಗಳ ಕೇವಲ ಐದು ರೂಪಾಯಿಗಳ ಸಂಪಾದನೆಗಾಗಿ ನಾಲ್ಕಾರು ಮೈಲಿ ನಡೆದು ಹೋಗಿ ಪಾಠ ಹೇಳಿ ಬರಬೇಕಾಗುತ್ತಿತ್ತು. ಅದರಲ್ಲಿ ಮನೀ ಇಷ್ಟು ಕಳಿಸಿ, ತಾನು ಫೀಸ್ ಇತ್ಯಾದಿಗಳಿಗಾಗಿ ಕೊಂಚ ಉಳಿಸಿಕೊಳ್ಳಬೇಕಾಗುತ್ತಿತ್ತು. ಒಮ್ಮೆ ಒಬ್ಬ ಕೆಲಸಗಾರನಿಂದ ಅರ್ಧ ರೂಪಾಯಿ ಸಾಲ ಮಾಡಿದರು. ಇದನ್ನು ಬಹು ದಿನಗಳು ತೀರಿಸಲಾಗಲಿಲ್ಲ. (ಇದನ್ನು ಅವನಿಗೆ ಅವರು ಹಿಂತಿರಿಗಿಸಿದ್ದು ಐದು ವರ್ಷಗಳ ನಂತರ!) ಈ ಬಡತನದ ಒತ್ತಡವನ್ನು ಸಹಿಸಲಾರದೆ ಒಮ್ಮೊಮ್ಮೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದ್ದೂ ಉಂಟು. ಈ ಸಂಗತಿಯನ್ನು ಪ್ರೇಮಚಂದ್ ರು ತಮ್ಮ ಮಿತ್ರರ ಮುಂದೆ ಒಪ್ಪಿಕೊಂಡಿದ್ದಾರೆ.

ಒಂದು ಸಂಜೆ. ಮೂರು ದಿನೈಂದಲೂ ಹೊಟ್ಟೆ ಹಸಿದಿದ್ದು ಬೇರೊಂದು ದಾರಿ ಕಾಣದೆ ತನ್ನ ಲೆಕ್ಕದ ಪುಸ್ತಕವನ್ನು ಮಾರುವುದಕ್ಕೆ ಹೋಗಿದ್ದಾರೆ ಹದಿನೈದು ಹದಿನಾರರ ಹರೆಯದ ಪ್ರೇಮಚಂದ್. ಅವರ ದುಸ್ಥಿತಿಯನ್ನು ಒಬ್ಬರು ಕರುಣೆಯಿಂದ ಕಣ್ತೆರೆದು  ನೋಡಿದರು. ವಿಚಾರಿಸಿ ಪರಿಸ್ಥಿತಿಯನ್ನು ಅರಿತರು. ಉದಾರಿಗಳು ಸಹಾಯ ಮಾಡಲು ಮುಂದೆ ಬಂದರು. ಹೀಗೆ ನೆರವಿಗೆ ಬಂದವರು ಒಂದು ಶಾಲೆಯಲ್ಲಿ ಮುಖ್ಯೋಪಾಧ್ಯಾಯರು. ಅವರು ತಮ್ಮ ಶಾಲೆಯಲ್ಲಿ ಮಾಸ್ತರರಾಗಿ ಪ್ರೇಮಚಂದ್ ರನ್ನು ನೇಮಿಸಿಕೊಂಡರು. ತಿಂಗಳಿಗೆ ಹದಿನೆಂಟು ರೂಪಾಯಿ ವೇತನ ಕೊಡಲು ಒಪ್ಪಿಸಿದರು.

ಪ್ರೇಮಚಂದ್ ರ ಪಾಲಿಗೆ ಅದೊಂದು ಕುಬೇರನ ನಿಧಿಯಾಯಿತು. ಅದಕ್ಕೂ ಹೆಚ್ಚಿನ ಆನಂದ ಪ್ರೇಮಚಂದ್ ರಿಗೆ ಖಾಸಗಿಯಾಗಿ ಇಂಟರ್ ಮೀಡಿಯೆಟ್ ಪರೀಕ್ಷೆಗೆ  ಓದುವುದಕ್ಕೆ ಅನುಮತಿ ದೊರೆತುದರಿಂದಾಯಿತು.

ಶ್ರಮಜೀವಿ

ಇಷ್ಟೆಲ್ಲಾ ತೊಂದರೆ ತೊಡಕಿನಲ್ಲಿದ್ದರೂ ಬರಹಗಾರನಾಗಬೇಕೆಂಬ ಹಂಬಲ ಪ್ರೇಮಚಂದ್ ರನ್ನು ಕಾಡುತ್ತಿತ್ತು. ೧೯೦೧ ರಲ್ಲಿ ಅವರ ಮೊದಲ ಲೇಖನ ಉರ್ದುವಿನಲ್ಲಿ ಅಚ್ಚಾಯಿತು. ಮೊದಲ ಲೇಖನ ಉರ್ದುವಿನಲ್ಲಿ ಅಚ್ಚಾಯಿತು. ಮೊದಲ ಪುಸ್ತಕ ಅಚ್ಚಾದದ್ದು. ೧೯೦೩ ರಲ್ಲಿ. ತಮ್ಮ ಕಾಲದ ಜೀವನದ ಘಟನೆಗಳನ್ನು ಕುರಿತು ಪ್ರಾರಂಭದಲ್ಲಿ ಬರೆಯುತ್ತಿದ್ದರು. ಕೆಲವು ರೇಖಾಚಿತ್ರಗಳನ್ನು ಬರೆದರು. ೧೯೦೭ ರ ಹೊತ್ತಿಗೆ ಉರ್ದುವಿನಲ್ಲಿ ಸಣ್ಣ ಕಥೆಗಳನ್ನು ಬರೆಯತೊಡಗಿದರು.  ಕಾದಂಬರಿಯನ್ನು  ಬರೆಯುವುದಕ್ಕೆ ಮನಸ್ಸು ಹಾತೊರೆಯುತ್ತಿತ್ತು. ಬರೆದುದೆಲ್ಲವೂ ಅಚ್ಚಾಗುತ್ತಿದ್ದುದನ್ನು ಕಂಡು ಬರಹಗಾರನಾಗಬೇಕೆಂಬ ಹಂಬಲ ಹೆಮ್ಮರವಾಗಿ ಬೆಳೆಯಿತು.

೧೯೧೪ ರಲ್ಲಿ ಪ್ರೇಮಚಂದ್ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಶ್ರಮವಹಿಸಿ ದುಡಿಯುತ್ತಿದ್ದರೆಂಬುದನ್ನು ಅವರ ದಿನಚರಿಯನ್ನು ನೋಡಿಯೇ ತಿಳಿಯಬಹುದು.

ಬೆಳಗಿನ ಜಾವ ಐದು ಗಂಟೆಗಾಗಲೇ ಎದ್ದು ನಿತ್ಯ ಕ್ರಿಯೆಯನ್ನು ತೀರಿಸಿಕೊಂಡು “ಸಾಹಿತ್ಯ ಸೇವೆ” ಗಾಗಿ ಕುಳಿತುಕೊಳ್ಳುತ್ತಿದ್ದರು. ಬೆಳಗ್ಗೆ ಒಂಬತ್ತರಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಶಾಲೆಯಲ್ಲಿ ಪಾಠ ಹೇಳುವುದು, ಅನಂತರ ನಡೆದು ಮನೆಗೆ ಬಂದು ಊಟ ವಿಶ್ರಾಂತಿ, ಪುನಃ ಸಂಜೆ ಆರು ಗಂಟೆಯಿಂದ ಎಂಟು ಗಂಟೆಯವರೆಗೆ ಬರವಣಿಗೆಯ ಕೆಲಸ.

ಹೀಗೆ ಎಳೆಯ ವಯಸ್ಸಿನಲ್ಲಿ ಅವರು ಬೆಳಗಿನಿಂದ ರಾತ್ರಿಯವರೆಗೆ ಕ್ರಮಬದ್ಧವಾಗಿ, ಶಿಸ್ತಿನಿಂದ ಕೆಲಸ ಮಾಡುತ್ತಿದ್ದರು.

ಅವರು ದುಡಿಮೆಯ ಜೀವನವನ್ನು ಅಮರಣಾಂತ ಸಾಗಿಸಿದರು. ವಿಶ್ರಾಂತಿ ಮನರಂಜನೆ ಮುಂತಾದವನ್ನು ಕಂಡರಿಯದ ಜೀವನ ಅವರದಾಗಿತ್ತು.

ವಿಧವೆಯನ್ನು ಮದುವೆಯಾದರು.

ಅವರ ಮೊದಲ ಹೆಂಡತಿ ೧೯೦೪ ರಲ್ಲಿ ತೀರಿಕೊಂಡಳು. ಅನಂತರ ಎರಡನೆಯ ಮದುವೆ ಮಾಡಿಕೊಳ್ಳಲು ಬಂಧುಗಳು ಹುರಿದುಂಬಿಸಿದರು. ಅವರು ಪ್ರೇಮಚಂದ್‌ರಿಗೆ, “ನೀನಿನ್ನೂ ಯುವಕ. ಈಗ ಸಾಕಷ್ಟು ವರಮಾನ ಇದೆ. ಮದುವೆ ಮಾಡಿಕೊಳ್ಳದೇ ಇರುವುದು ಸರಿಯಲ್ಲ ಎಂದು ಒತ್ತಾಯ ತಂದು ಮದುವೆಗೆ ಒಪ್ಪಿಸಿದರು.

ಪ್ರೇಮಚಂದ್ ರು ಮತ್ತೆ ಮದುವೆಯಾಗಲು ಒಪ್ಪಿದರು ಆದರೆ ಒಂದು ಹಟ ಹಿಡಿದರು. “ಯಾರಾದರೂ ಸರಿಯೆ ಒಬ್ಬ ವಿಧವೆಯನ್ನು ಮದುವೆಗೆ ಒಪ್ಪಿಸಿ ಕರೆತನ್ನಿ ಮದುವೆಯಾಗುತ್ತೇನೆ” ಎಂದರು.

ಅಂದಿನ ದಿನದಲ್ಲಿ ಇದೊಂದು ಕ್ರಾಂತಿಕಾರೀ ವಿಚಾರವಾಗಿತ್ತು. ಹಿಡಿದ ಹಠವನ್ನು ಬಿಡದ ದೃಢ ನಿಲುವು ಪ್ರೇಮಚಂದ್ ರದು.

ಸ್ವಲ್ಪ ಕಾಲದ ನಂತರ ಅವರು ಎರಡನೇ ಮದುವೆ ಮಾಡಿಕೊಂಡರು. ಅದೂ ಒಬ್ಬ ಬಾಲವಿಧವೆಯ ಸಂಗಡ.

ಇದರಿಂದ ಪ್ರೇಮಚಂದ್ ಗೆ ಬರಬಹುದಾಗಿದ್ದ ವರದಕ್ಷಿಣೆಗೆ ಕೊಡಲಿ ಪೆಟ್ಟು ಬಿತ್ತು. ಕೊಡಲಿಯ ಪೆಟ್ಟು ಹಾಕುವುದು ಪ್ರೇಮಚಂದ್ ರು ಒಪ್ಪಿದ್ದ ಆದರ್ಶಗಳಲ್ಲೊಂದು. ಈ ವರದಕ್ಷಿಣೆ ಎಂಬ ಪಿಡುಗು ಸಮಾಜದಲ್ಲಿ ಅದೆಷ್ಟು ಅನರ್ಥ ಪರಂಪರೆಗೆ ಕಾರಣವಾಗಿದೆ ಎಂಬುದನ್ನು ಅನೇಕ ಕಥೆ ಕಾದಂಬರಿಗಳಲ್ಲಿ ಬರೆದಿದ್ದಾರೆ. ಈ ವರದಕ್ಷಿಣೆಯ ಕಾರಣವಾಗಿ ಹೆಣ್ಣು ಮಕ್ಕಳ ವಿಷಯದಲ್ಲಿ ತಂದೆ ತಾಯಿಯ ಮನಸ್ಸಿನಲ್ಲೂ ಸಮಾಜದಲ್ಲೂ ಹೇಗೆ ಕುತ್ಸಿತ ಭಾವನೆ ಬೆಳೆದು ಬರುವುದೆಂಬುದನ್ನು ಬಹು ಮಾರ್ಮಿಕವಾಗಿ ಒಂದು ಕಥೆಯಲ್ಲಿ ಒಂದೇ ವಾಕ್ಯದಲ್ಲಿ ಹೇಳಿದ್ದಾರೆ-“ಈ ಹೆಣ್ಣು ಮಕ್ಕಳು ಹುಲ್ಲು ಜೊಂಡಿನಂತೆ ಬೆಳೆಯುತ್ತಾರೆ.” ಇನ್ನೊಂದು ಕಥೆಯಲ್ಲಿ ಬರೆಯುತ್ತಾರೆ: “ಅವರಿಗೆ ಏಳು ಜನ ಹೆಣ್ಣು ಮಕ್ಕಳಿದ್ದರು. ಏಳೂ ಜನ ಬದುಕಿದ್ದರು.” ಇಂತಹ ಹೃದಯವನ್ನು ಹಿಂಡುವ ಭಾವನೆ ಅಳಿದು ಸಮಾನತೆಯ ಭಾವನೆ ಮೂಡಬೇಕಾಗಿದ್ದರೆ ಈ ವರದಕ್ಷಿಣೆಯ ಪಿಡುಗು ನಾಶವಾಗಬೇಕು. ಇದಕ್ಕೆ ಯುವಕರೇ ಮುಂದೆ ಬರಬೇಕು. ಈ ಆದರ್ಶವನ್ನು ಬೋಧಿಸಿದರು. ಅಂತೆಯೇ ನಡೆದು ತೋರಿಸಿದರು.

ಲೆಕ್ಕದ ಪುಸ್ತಕ ಮಾರಲು ಹೋದರು

ಮನಸ್ಸಿಗೆ ಸರಿ ಎಂದು ತೋರಿದುದನ್ನು ಮಾಡಿ ಬಿಡುವುದು ಪ್ರೇಮಚಂದ್ ರ ವ್ಯಕ್ತಿತ್ವದ ಇನ್ನೊಂದು ಗುಣವಾಗಿತ್ತು.

ಬಾಪೂ ತೋರಿದ ದಾರಿ

೧೯೨೦ ನೇ ವರ್ಷ ಮಹಾತ್ಮಾ ಗಾಂಧೀಜಿಯವರು ಗೋರಖಪುರಕ್ಕೆ ಬಂದಿದ್ದರು. ದೇಶಾದ್ಯಂತ ಅಸಹಕಾರ ಚಳುವಳಿಯ ಕಹಳೆ ಮೊಳಗುತ್ತಿತ್ತು. ಗಾಂಧೀಜಿಯವರು ಜನಜಾಗೃತಿಯನ್ನುಂಟು ಮಾಡಲು ಪ್ರವಾಸ ಕೈಗೊಂಡಿದ್ದರು. ಅವರ ಭಾಷಣವನ್ನು ಪ್ರೇಮಚಂದ್ ರೂ ಮತ್ತು ಅವರ ಎರಡನೆ ಪತ್ನಿ ಶಿವರಾಣಿಯವರೂ ಕೇಳಿದರು.

ಮೂರನೆಯ ದಿನ, ಸಾಯಂಕಾಲ ಮನೆಗೆ ಬರುವಾಗ ಪ್ರೇಮಚಂದ್ ರ ಹೆಜ್ಜೆ ಮೆಲ್ಲಗೆ ಮುಂದೆ ಸಾಗಿತ್ತು. ಶಾಲೆಯಿಂದ ಮನೆಗೆ ಬರುವಾಗ ಮನೆ ಹತ್ತಿರ ಬಂದಂತೆ ಉತ್ಸಾಹದ ಬದಲು ಬೇಡಿ ತೊಡಿಸಿದಂತೆ ಏನೋ ಚಿಂತೆ ಕಾಡಹತ್ತಿತ್ತು. ಮನೆಗೆ ಬಂದರು. ಬಾಗಿಲಲ್ಲಿ ನಿಂತು ದೂರದಿಂದಲೇ ಪತಿಯನ್ನು ನೋಡುತ್ತಿದ್ದ ಶಿವರಾಣಿಗೆ ಆಶ್ಚರ್ಯವಾಯಿತು. ಎಂದೂ ಹೀಗೆ ಖಿನ್ನರಾಗಿದ್ದುದನ್ನು ಕಂಡಿರಲಿಲ್ಲ. ಆದ್ದರಿಂದಲೇ ಬಹು ವ್ಯಾಕುಲಳಾಗಿ ಕೇಳಿದಳು.

“ಇದೇನು? ಹೀಗೆ ಚಿಂತೆಯಲ್ಲಿ ಮುಳುಗಿದ್ದೀರಿ?”

“ಏನಿಲ್ಲ……………..”

“ಏನಿಲ್ಲ! ಹೇಳಿ ಏನಾಯಿತು?”

“………………………………..”

“ಏಕೆ ? ಮತ್ತೆ ಆ ಕಲೆಕ್ಟರ್ ಕರೆದು ಏನಾದರೂ ಛೀಮಾರಿ ಹಾಕಿದನೇ? ಈಗ ಹೇಗೂ ಬರೆಯುವುದನ್ನು ಬಿಟ್ಟು ಬಿಟ್ಟಿದ್ದೀರಿ. (ಪ್ರೇಮಚಂದ್ ಎಂಬ ಹೆಸರಿನಿಂದ ಬರೆಯುತ್ತಿರುವ ವ್ಯಕ್ತಿ ತನ್ನ ಗಂಡ ಎಂಬುದು ಶಿವರಾಣಿಗೂ ಗೊತ್ತಿರಲಿಲ್ಲ. ನವಾಬ್ ರಾಯ್ ಎಂಬ ಹೆಸರಿನಿಂದ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದರು.) ನಿಮಗೆ ಬೇರೆ ಏನು ಯೋಚನೆ?”

ಗುಲಾಮನಾಗಿದ್ದು ಸುಖ ಬೇಡ.

“ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟೆ!”

“ರಾಜೀನಾಮೆ! ಏಕೆ? ಏನಾದರೂ ತಿಕ್ಕಾಟ?”

“ಇಲ್ಲ”

“ಮತ್ತೇ?

“ನಾನೇ ರಾಜಿನಾಮೆ ಕೊಟ್ಟೆ. ನನ್ನ ಹಿತೈಷಿಗಳು ಧನಪತ್ ರಾಯ್, ತಿಂಗಳಿಗೆ ಯಾರು ೧೭೫ ರೂ. ಸಂಬಳ ಕೊಡುತ್ತಾರೆ ಹೇಳು ನೋಡೋಣ. ಇಬ್ಬರು ಮಕ್ಕಳು ಹೆಂಡತಿ ಎಲ್ಲರನ್ನೂ ಬೀದಿ ಭಿಕಾರಿಗಳಾಗಿ ಮಾಡಬೇಡ ಎಂದರು”

“ಆದರೆ……… ಮತ್ತೇ?”

“ಆದರೇನು, ನಿನ್ನೆ ಬಾಪೂಜೀ ಭಾಷಣ ಕೇಳಿದ ಮೇಲೆ ಈ ವಿಲಾಯಿತಿ ಸರ್ಕಾರದ ಕೈಂಕರ್ಯಕ್ಕೆ ತಿಲಾಂಜಲಿ ಕೊಡಬೇಕೆಂದು ಯೋಚಿಸಿದ್ದೆ. ಆದ್ದರಿಂದ ರಾಜೀನಾಮೆ ಕೊಟ್ಟು ಬಂದೆ.”

“ಈಗ  ಈ ಚಿಂತೆ ಏಕೆ?”

“ಈಗ ಆ ಹಿತೈಷಿಗಳು ಹೇಳಿದ ಮಾತು ಕಿವಿಯಲ್ಲಿ ಮೊಳಗುತ್ತಿದೆ. “ಧನಪತ್ ರಾಯ್” ನಿನ್ನ ಭಾವುಕತೆಗೆ ಮೆಚ್ಚುತ್ತೇವೆ. ಆದರೆ ಈ ಖಾದಿ ಜನ ನಿಮ್ಮ ಬವಣೆ ದೂರ ಮಾಡಲು ಬರುವುದಿಲ್ಲ. ಮಡದಿ ಮಕ್ಕಳನ್ನು ಬೀದಿ ಪಾಲು ಮಾಡಬೇಡ. ಈ ರಾಜಕೀಯ ಚಳುವಳಿ ಸದಾ ಇರುವುದಿಲ್ಲ. ದುಡುಕಬೇಡ” ಎಂದಿದ್ದರು”

“ಅದಕ್ಕೆ ನೀವೇನು ಹೇಳಿದಿರಿ?”

“ಏನು ಹೇಳುವುದು, “ಗುಲಾಮನಾಗಿ ಸುಖವಾಗಿರುವ ಬದಲು ಸ್ವತಂತ್ರವಾಗಿ ಒಪ್ಪತ್ತು ಅರೆಗಂಜಿ ಕುಡಿದಿರಲು ಸಿದ್ಧನಿದ್ದೇನೆ” ಎಂದು ದೃಡವಾಗಿ ಹೇಳಿದೆ”.

“ನಿಜಕ್ಕೂ!”

“ಸಂದೇಹವೇ?”

“ಹಾಗಾದರೆ ಈ ದಿನ ನಾನು ಹಬ್ಬ ಮಾಡುತ್ತೇನೆ” ಎಂದು ಚಿಗರೆಯಂತೆ ಒಳಗೆ ಓಡಿದಳು ಹೆಂಡತಿ. ಒಂದು ಬೆಲ್ಲದ ಚೂರನ್ನು ಹಿಡಿದುಕೊಂಡು ಮತ್ತೆ ಓಡಿಬಂದಳು ಅದನ್ನು ಪ್ರೇಮಚಂದ್ ರ ಬಾಯಲ್ಲಿ ಹಾಕಿ, “ಇವತ್ತು ನಿಜಕ್ಕೂ ಒಬ್ಬ ಸ್ವತಂತ್ರ ಪ್ರಜೆಯ, ದೇಶಭಕ್ತನ, ಭಾರತಾಂಬೆಯ ವೀರಪುತ್ರನ ಹೆಂಡತಿಯಾಗುವ ಸೌಭಾಗ್ಯ ನನ್ನ ಪಾಲಿನದಾಯಿತೆಂದು ಸಂತೋಷಿಸುತ್ತೇನೆ……” ಎಂದಳು. ಹೀಗೆಂದು ಭಾವಗದ್ಗದಳಾಗಿ ಒಂದೆರಡು ಕ್ಷಣ ಇದ್ದವಳು ಚೇತರಿಸಿಕೊಂಡು….. “ನೀವು ಸಂತೋಷ ಪಡಬೇಕು, ಅದರ ಬದಲು ಇಷ್ಟು ಚಿಂತೆ ಏತಕ್ಕೆ?” ಎಂದು ಪ್ರಶ್ನಿಸಿದಳು.

“ನನಗೆ ನೀನು ಏನು ಹೇಳುವೆಯೋ ಎಂದು ಹೆದರಿಕೆ ಇತ್ತು. ಇನ್ನು ಬಡತನದಲ್ಲಿ ನಮ್ಮ ಜೀವನ ಸಾಗಬೇಕು. ನೌಕರಿಯಂತೂ ಮಾಡುವುದಿಲ್ಲ. ಚರಖಾ ಮಾಡಿ ಮಾರುತ್ತೇನೆ. ಏನು ಬಂದರೆ ಅದರಲ್ಲಿ ಉಪ್ಪು ಗಂಜಿ ಕುಡಿದು ಹಾಯಾಗಿರೋಣ” ಎಂದರು.

ಆಗಲೂ ತಾನು ಪ್ರೇಮಚಂದ್ ಎಂಬ ಅಂಕಿತದಿಂದ ಬರೆಯುತ್ತಿರುವುದಾಗಿಯೂ ಅದರಿಂದಲೂ ಅಲ್ಪ ಸ್ವಲ್ಪ ವರಮಾನ ಬಂದೀತೆಂದೂ ಹೆಂಡತಿಗೆ ತಿಳಿಸಲೇ ಇಲ್ಲ.

ದಿಟ್ಟ ಹೋರಾಟ

ಕೆಲಸಕ್ಕೆ ತಿಲಾಂಜಲಿ ಕೊಟ್ಟ ಪ್ರೇಮಚಂದ್ ತಮ್ಮ ಹಳ್ಳಿಗೆ ಹಿಂತಿರುಗಿದರು. ಮಹಾವೀರ ಪ್ರಸಾದ್ ಪೋದ್ದಾರ್ ಎಂಬುವರ ಸಹಾಯದಿಂದ ಚರಖಾ ಸಂಘವನ್ನು ಸ್ಥಾಪಿಸಿದರು. ಅದು ಹೆಚ್ಚು ಕಾಲ ನಡೆಯಲಿಲ್ಲ. ತಮ್ಮ ಕೃತಿಗಳನ್ನು ತಾವೇ ಪ್ರಕಟಿಸಿದರೆ ನಾಲ್ಕು ಕಾಸು ನೋಡಬಹುದೆಂಬ ಹಂಬಲದಿಂದ ೧೯೨೩ ರಲ್ಲಿ ಸರಸ್ವತೀ ಪ್ರೆಸ್ ಸ್ಥಾಪಿಸಿದರು. ಆದರೆ ವ್ಯವಹಾರ ಕುಶಲರಲ್ಲದ ಸರಳ ಸ್ವಭಾವದ ಪ್ರೇಮಚಂದ್ ರು ನಷ್ಟವನ್ನೇ ಅನುಭವಿಸಬೇಕಾಗಿ ಬಂತು.  ಆರ್ಥಿಕ ಮುಗ್ಗಟ್ಟು ಮತ್ತಷ್ಟು ತಲೆದೋರಿತು.

ಅದೇ ಕಾಲದಲ್ಲಿ ಅಂದರೆ ೧೯೨೪ ರಲ್ಲಿ ಆಳ್ವಾರ್ ಸಂಸ್ಥಾನಾಧಿಪತಿಗಳು ಪ್ರೇಮಚಂದ್ ರನ್ನು ಕೆಲಸಕ್ಕೆ ಕರೆದರು. ಎಲ್ಲ ಸೌಕರ್ಯವನ್ನೂ ಕೊಟ್ಟು ಸಂಬಳದ ಆಸೆಯನ್ನೂ ಮುಂದಿಟ್ಟರು. ಆದರೆ ಸ್ವತಂತ್ರನಾಗಿ ಬಾಳುವುದನ್ನು ಜೀವನದ ದೃಢ ಸಂಕಲ್ಪವಾಗಿಟ್ಟುಕೊಂಡಿದ್ದ ಪ್ರೇಮಚಂದ್ ಆ ಆಕರ್ಷಣೆಗೆ ಬಲಿಯಾಗಲಿಲ್ಲ. ಅವರ ಪತ್ನಿ ಶಿವರಾಣಿಯವರು ಸಹ ಬೆಂಬಲವನ್ನಿತ್ತದ್ದು ಗಮನಾರ್ಹ.

ಕೆಲಸಕ್ಕೆ ರಾಜೀನಾಮೆ ಕೊಟ್ಟ ನಂತರ ಪ್ರೇಮಚಂದ್ ರು ಮುಖ್ಯವಾಗಿ ಬರಹಗಾರರಾಗಿದ್ದರು. ಆದರೆ ಹಣದ ಅಡಚಣೆಯಿಂದ ಆಗಾಗ ಬೇರೆ ಕೆಲಸಗಳಿಗೆ ಸೇರಿಕೊಂಡರು.

೧೯೨೪ ರಲ್ಲಿ ಪ್ರೇಮಚಂದ್ ರು “ಮಾಧುರೀ” ಎಂಬ ಪತ್ರಿಕೆಯ ಸಂಪಾದಕರಾದರು. ಸಂಬಳ ಇನ್ನೂರು ರೂಪಾಯಿ. ಈ ಕೆಲಸಕ್ಕಾಗಿ ಲಕ್ನೋಗೆ ಹೋದರು. ಇದೇ ಕಾಲದಲ್ಲಿ ನವಲಕಿಶೋರ ಅಚ್ಚು ಕೂಟಕ್ಕಾಗಿಯೂ ಕೆಲಸ ಮಾಡಿದರು. ಅಚ್ಚುಕೂಟದ ಮಾಲಿಕರು ಸತ್ತು ಹೋದರು. ಅವರ ಆಸ್ತಿ ಸರ್ಕಾರದ ನ್ಯಾಯಲಯದ ಆಡಳಿತಕ್ಕೆ ಸೇರಿತು. ಸರ್ಕಾರದ ಕೆಲಸ ಮಾಡುವುದಿಲ್ಲ ಎಂದು ತೀರ್ಮಾನಿಸಿದವರಲ್ಲವೆ ಪ್ರೇಮಚಂದ್ ರು? ಕೆಲಸಬಿಟ್ಟು ವಾರಾಣಸಿಗೆ ಹಿಂದಿರುಗಿದರು. ವಿನೋದ ಶಂಕರ್ ವ್ಯಾಸ ಎಂಬವರಿಂದ “ಜಾಗರಣ” ಎಂಬ ಪತ್ರಿಕೆಯನ್ನು ತೆಗೆದುಕೊಂಡರು ಇದರಿಂದ ಇವರ ಸಮಸ್ಯೆಗಲೂ ಹೆಚ್ಚಾದವು.  ಅಷ್ಟೆ.

೧೯೩೦ ರಲ್ಲಿ ಜೊತೆಗೆ ತಾವೇ ಒಂದು ಪತ್ರಿಕೆ ಪ್ರಾರಂಭಿಸಿದರು. “ಹಂಸ” ಜನರ ಮಾನಸದಲ್ಲಿ ಜಾಗೃತಿಯ ಬೀಜವನ್ನು ಬಿತ್ತಲು ಪ್ರಾರಂಭಿಸಿತು. ಗಾಂಧೀಜಿಯವರು ರಾಜಕೀಯ ಕ್ಷೇತ್ರದಲ್ಲಿ ಏನು ಕೆಲಸ ಮಾಡುತ್ತಿದ್ದರೋ ಅದೇ ಕೆಲಸಕ್ಕೆ ಸಾಹಿತ್ಯವನ್ನು ಸಾಧನವನ್ನಾಗಿ ಮಾಡಿಕೊಂಡು ಜನಮನವನ್ನು ಹದಗೊಳಿಸುವುದು ಮಾಡಿಕೊಂಡು ಜನಮನವನ್ನು ಹದಗೊಳಿಸುವುದು ಪ್ರೇಮಚಂದ್ ರ ಗುರಿಯಾಗಿತ್ತು. ಆದರೆ “ಜಾಗರಣ” ದಿಂದಲೂ “ಹಂಸ” ದಿಂದ ದೊಡ್ಡ ಮೊತ್ತದ ಠೇವಣಿಯನ್ನು ಕೇಳಿತು. ಆದರೆ ಯಾವ ಹೆದರಿಕೆಗೆ ಬೆದರಿಕೆಗೆ ಜಗ್ಗದ ವ್ಯಕ್ತಿಯಾಗಿದ್ದರು ಪ್ರೇಮಚಂದ್. ತಮ್ಮ ವಿಚಾರವನ್ನು ಜನರ ಹೃದಯಕ್ಕೆ ಮುಟ್ಟಿಸುವಲ್ಲಿ ಏನೊಂದು ಅಡ್ಡಿ ಆತಂಕವನ್ನೂ ಲೆಕ್ಕಿಸದವರಲ್ಲ.

ಚಲನಚಿತ್ರದ ಜಗತ್ತು

ಪ್ರೇಮಚಂದ್ ರಿಗೆ ಧನಿಕನಾಗಬೇಕೆಂಬ ಆಸೆ ಸುತಾರಾಂ ಇರಲಿಲ್ಲ. ಗಾಂಧೀಜಿಯವರಂತೆ ಸ್ವ ಇಚ್ಛೆಯಿಂದ ದಾರಿದ್ರ್ಯವನ್ನು ಅಂಗೀಕರಿಸಿದ್ದರು. ಆದರೆ ಜನಾನುರಾಗಿಯಾಗಬೇಕೆಂದೂ ತನ್ನ ವಿಚಾರವನ್ನು ಜನರ ಸಮ್ಮುಖ ಮಂಡಿಸಿಬೇಕೆಂದೂ ತನ್ಮೂಲಕ ಜನತೆಯ ಸೇವೆ ಮಾಡಬೇಕೆಂದೂ ಹಾತೊರೆಯುತ್ತಿತ್ತು ಅವರ ಚೇತನ. ಆದ್ದರಿಂದಲೇ ಒಮ್ಮೆ ಅಂದರೆ ೧೯೩೪ ರಲ್ಲಿ “ಅಜಂತಾ ಮೂವಿಟೋನ್” ಎಂಬ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಸಿನಿಮಾ ಜಗತ್ತಿಗೆ ಕಾಲಿಟ್ಟರು. ಮುಂಬಯಿಗೆ ಹೋಗಿ ಆ ಸಂಸ್ಥೆಗಾಗಿ “ಮೀಲ್ ಮಜದೂರ ಮತ್ತು “ಶೇರ್ ದಿಲ್ ಔರತ್” ಎಂಬ ಕಥೆಗಳನ್ನು ಬರೆದರು. “ಸೇವಾಸದನ್” ಎಂಬುದೂ ತೆರೆಯ ಮೇಲೆ ಬಂದಿತು. ಆದರೆ ಪ್ರೇಮಚಂದ್ ರ ಭ್ರಮೆ ನಿರಸನವಾಯಿತು. ಜನರಲ್ಲಿರುವ ಹಣವನ್ನು ಸುಲಿಗೆ ಮಾಡಿಕೊಳ್ಳುವದೊಂದೇ ಸಿನಿಮಾ ತಾಯಾರಿಸುವವರ ಗುರಿಯಾಗಿತ್ತು. ಜನಜೀವನವನ್ನು ತಿದ್ದುವುದಾಗಲೀ ಜನರ ಅಭಿರುಚಿಯನ್ನು ಉತ್ತಮಗೊಳಿಸಿ ಉತ್ತಮ ಶೀಲಸಂಪನ್ನರಾಗಿ ಮಾಡುವುದಾಗಲೀ ಅವರ ಗುರಿಯಾಗಿರಲಿಲ್ಲ. ಪ್ರೇಮಚಂದ್ ರಿಗೆ ಚಲನಚಿತ್ರಗಳಿಂದ ವರ್ಷಕ್ಕೆ ಎಂಟು ಸಾವಿರ ರೂಪಾಯಿಗಳ ವರಮಾನ ಬರುತ್ತಿತ್ತು. ಆದರೆ ನಿರ್ಮಾಪಕರ ಮನೋಧರ್ಮವನ್ನು ನೋಡಿ ಅವರಿಗೆ ಬೇಸರವಾಯಿತು. ಚಲನಚಿತ್ರಗಳ ಪ್ರಪಂಚ ಬಿಟ್ಟು ಕಾಶಿಗೆ ಹಿಂತಿರುಗಿದರು.

ಚಿತ್ರ ಜಗತ್ತಿನಿಂದ ಅವರಿಗೆ ಬಂದ ಲಾಭವೆಷ್ಟು? ಹೇಳಿಕೊಳ್ಳುವಂತೆ ಹಣವೇನೊ ಬರಲಿಲ್ಲ. ಕಡೆಗೆ ಉಳಿದಿದ್ದು ೧೪೦೦ ರೂಪಾಯಿ ಎಂದು ಅವರೇ ಹೆಳಿದ್ದಾರೆ.

ಜನರ ಸಂಪರ್ಕವನ್ನು ಬೆಳಸಿಕೊಳ್ಳಬೇಕೆಂಬ ಹಂಬಲದಿಂದಲೇ ಅವರು ಉರ್ದು ಭಾಷೆಯಲ್ಲಿ ಬರೆಯುವುದನ್ನು ಬಿಟ್ಟು ಹಿಂದಿಯಲ್ಲಿ ಬರೆಯಲು ತೊಡಗಿದ್ದರು. ನಾಟಕಗಳ ಬದಲು ಕಥೆ, ಕಾದಂಬರಿಗಳನ್ನು ತಮ್ಮ ಮಾಧ್ಯಮವನ್ನಾಗಿ ಆರಿಸಿಕೊಂಡಿದ್ದರು. ಆದರ್ಶಕ್ಕಾಗಿ ಬಾಳುವೆ ನಡೆಸಿದ ಪ್ರೇಮಚಂದ್ ರನ್ನು ಧನದ ಆಸೆಯಾಗಲೀ ಪದವಿ ಪ್ರತಿಷ್ಠೆಗಳ ಆಸೆಯಾಗಲೀ ವಿಚಲಿತಗೊಳಿಸಲಾಗಲಿಲ್ಲ. ಅವರು ಬ್ರಿಟಿಷ್  ಸಾಮ್ರಾಜ್ಯಶಾಹಿಯೊಡನೆ ಕಲಿತನದ ಹೋರಾಟವನ್ನು ನಡೆಸಿದ್ದರು. ಬರವಣಿಗೆ ಅವರ ಶಸ್ತ್ರವಾಗಿತ್ತು. ಸರ್ಕಾರ ಪ್ರೇಮಚಂದ್ ರನ್ನು ಹತ್ತಿಕ್ಕಲು ಮಾಡಿದ ಯತ್ನವೆಲ್ಲ ವಿಫಲವಾಗಿತ್ತು. ೧೯೯೨ ರಲ್ಲಿ ಅವರಿಗೆ “ರಾಯ್ ಸಾಹೇಬ್” ಎಂದು ಬಿರುದು ಕೊಟ್ಟು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸಿತು. ಆದರೆ ಪ್ರೇಮಚಂದ್ ರು ಆ ಬಿರುದನ್ನು ಒಪ್ಪಿಕೊಳ್ಳಲಿಲ್ಲ.

ನಾನಿನ್ನು ಹೊರಟೆ

ತಮ್ಮ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರೇಮಚಂದ್ ರು ಬಹಳ ಸಾಹಸಪಟ್ಟರು. ಏನೇನು ಮಾಡಿದರೂ ಸರಿಹೋಗಲಿಲ್ಲ.

ಇಷ್ಟು ಕಷ್ಟಗಳ ಮಧ್ಯೆಯು ಅವರು ಭಾರತಲ್ಲೆಲ್ಲ ಸಂಚರಿಸಿದರು. ಬೆಂಗಳೂರು, ಮೈಸೂರುಗಳಿಗೂ ಬಂದಿದ್ದರು. ಬಹು ವರ್ಷಗಳಿಂದ ಅವರಿಗೆ ಹೊಟ್ಟೆಯ ತೊಂದರೆ ಇದ್ದಿತು. ಅವರ ಕಷ್ಟ- ಚಿಂತೆಗಳಿಂದ ಆರೋಗ್ಯ ಇನ್ನೂ ಕೆಟ್ಟಿತು. ೧೯೩೬ ರ ಜೂನ್ ೧೬ ರ ಹೊತ್ತಿಗೆ ತೀರ ಕೆಟ್ಟಿತು. ೧೯ ರಂದು ಅವರು ಒಂದು ಸಭೆಯಲ್ಲಿ ಮಾತನಾಡಬೇಕಿತ್ತು. ಸಾಧ್ಯವಾಗಲಿಲ್ಲ. ೨೫ ರಂದು ರಕ್ತ ವಾಂತಿಯಾದಾಗ ತಮ್ಮ ಬಾಳಿನ ಕಥೆ ಮುಗಿಯುತ್ತ ಬಂತು ಎಂದು ಅವರಿಗೆ ಸ್ಪಷ್ಟವಾಯಿತು. ಓಡಿಬಂದ ಶಿವರಾಣಿ ದೇವಿಗೆ, “ರಾಣಿ, ನಾನಿನ್ನು ಹೊರಟೆ” ಎಂದರು. ೧೯೩೬ ರ ಅಕ್ಟೋಬರ್೮ ರಂದು ಅವರು ತೀರಿಕೊಂಡರು.

ಆಗ ಅವರಿಗೆ ೫೬ ವರ್ಷ.

ಪಾಶ್ಚಾತ್ಯ ಶಿಕ್ಷಣ

ಪ್ರೇಮಚಂದ್ ರದು ವಿಚಿತ್ರ ಸ್ವಭಾವ. ಏನಾದರೊಂದು ತಿರ್ಮಾನ ಮಾಡಿದರೆ ಅದನ್ನು ಮಧ್ಯದಲ್ಲಿ ಕೈ ಬಿಟ್ಟು ಕುಳಿತುಕೊಳ್ಳುವ ದಾರ್ಢ್ಯ ಅವರದು. ವಿದ್ಯಾಭ್ಯಾಸದಲ್ಲಿ ಅವರಿಗಿದ್ದ ಆಸಕ್ತಿ ಬಡತನದ ಒತ್ತಡದಿಂದಾಗಿ ಕುಂಠಿತವಾಗಿದ್ದರೂ ಪೂರ್ಣ ಅಳಿದುಹೋಗಲಿಲ್ಲ.  ೧೯೧೪ ರಲ್ಲಿ ಇಂಟರ್ ಮಿಡಿಯೇಟ್ ಪರೀಕ್ಷೆ ಉತ್ತೀರ್ಣರಾದರು. ೧೯೧೯ ರಲ್ಲಿ ಪದವೀದರರೂ ಆದರು.

ಪ್ರೇಮಚಂದ್ ರು ಈ ಪಾಶ್ಚಾತ್ಯ ವಿದ್ಯಾಭ್ಯಾಸ ಕ್ರಮವನ್ನು ಕಿಂಚಿತ್ತೂ ಮೆಚ್ಚಿರಲಿಲ್ಲ. ಈ ವಿದ್ಯಾಭ್ಯಾಸ ಕ್ರಮವನ್ನು ಕಿಂಚಿತ್ತೂ ಮೆಚ್ಚಿರಲಿಲ್ಲ. ಈ ವಿದ್ಯಾಭ್ಯಾಸ ಪದ್ಧತಿಯ ಗುಣದೋಷಗಳನ್ನು ಚೆನ್ನಾಗಿ ಅರಿತಿದ್ದರು. ತಮ್ಮ ಅನೇಕ ಕಥೆ, ಕಾದಂಬರಿಗಳಲ್ಲಿ ಈ ವಿಷಯದಲ್ಲಿ ಅವರು ಹೇಳಿರುವುದನ್ನು ಕ್ರೋಢೀಕರಿಸಿದರೆ ಅದೊಂದು ಕೈ ದೀವಿಗೆಯಾಗುವುದು. ವ್ಯಕ್ತಿತ್ವದ ವಿಕಾಸಕ್ಕೆ ಪೋಷಕವಲ್ಲದ, ಗುರಿಯಿಲ್ಲದ, ಗುಲಾಮರನ್ನಾಗಿ ಮಾಡುವ ಈ ಆಯುಹರಣ ರೂಪವಾದ ವಿದ್ಯಾಭ್ಯಾಸ ಪದ್ಧತಿಯನ್ನು ಕಟುವಾಗಿ ಟೀಕಿಸಿದ್ದೂ ಕಂಡುಬರುತ್ತದೆ. “ಬಡೇ ಭಾಯೀ ಸಾಹಬ್” ಎಂಬ ಕಥೆಯಲ್ಲಿ ಮತ್ತು “ನಮಕ್ ಕಾ ದರೋಗಾ” ಎಂಬ ಕಥೆಯಲ್ಲಿ ಈ ಶಿಕ್ಷಣ ಪದ್ಧತಿಯ ಪಾಠಕ್ರಮವನ್ನು ಟೀಕಿಸಿದ್ದಾರೆ. “ಚೋರೀ” ಎಂಬ ಕಥೆಯಲ್ಲಿ ಒಬ್ಬ ಹುಡುಗ ಸುಳ್ಳು ಹೇಳಿ ಮೋಸಗೊಳಿಸಿದ್ದಕ್ಕೆ ಮೆಚ್ಚುಗೆಯನ್ನು ಇನ್ನೊಬ್ಬ ಹುಡುಗ ಸೂಚಿಸಿದಾಗ ಮೊದಲನೆಯವನು ಹೇಳುತ್ತಾನೆ.- “ಲೋ ನಾವೇನು ಎರಡು ಪುಸ್ತಕಾನೂ ಓದಿಲ್ಲ ಎಂದು ತಿಳಿದಿದ್ದಿಯಾ?” ಅಂದರೆ ಓದು ನಮಗೆ ಬಾಯಿ ಬಡಿಯುವುದನ್ನು ಕಲಿಸುತ್ತದೆ; ಸತ್ಯನಿಷ್ಠೆಯನ್ನಲ್ಲ! – ಹೀಗೆ ವಿದ್ಯಾಭ್ಯಾಸವು ನಮ್ಮ ಜೀವನದಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಭಾವನೆಗಳನ್ನೇ ತಲೆಕೆಳಗೆ ಮಾಡಿ ಬಿಟ್ಟಿರುವುದನ್ನು ಬಹು ನೊಂದುಕೊಂಡು ಕಟುವಾಗಿ ಟೀಕಿಸಿದ್ದಾರೆ.

ಅಪೂರ್ವ ವ್ಯಕ್ತಿತ್ವ

ಪ್ರೇಮಚಂದ್ ರದು ಹೋರಾಟದ ಬದುಕು. ಬಡತನದಲ್ಲಿ ಹುಟ್ಟಿದರು. ಬಡವರಾಗಿಯೇ ಬೆಳೆದರು. ಸ್ವಲ್ಪ ನೆಮ್ಮದಿ ಸಿಕ್ಕಿತು ಎನ್ನುವ ಹೊತ್ತಿಗೆ, ಬ್ರಿಟೀಷ್ ಸರ್ಕಾರದ ಸೇವೆ ಮಾಡುವುದಿಲ್ಲ ಎಂದು ತಿರ್ಮಾನಿಸಿ ಕೆಲಸವನ್ನು ಬಿಟ್ಟು ಬಡತನವನ್ನೇ ಆರಿಸಿಕೊಂಡರು. ಪ್ರೇಮಚಂದ್ ರು ತೀರಿಕೊಂಡ ಮೇಲೆ ಅವರ ಪುಸ್ತಕಗಳಿಂದ ಸಾವಿರಾರು ರೂಪಾಯಿಗಳ ಆದಾಯ ಬಂದಿತು. ಅವರು ಬದುಕಿದ್ದಾಗ ಎರಡು-ಮೂರು ರೂಪಾಯಿಗಳನ್ನು ಕೊಟ್ಟು ಪಾದರಕ್ಷೆ ಕೊಳ್ಳುವುದು ಅವರಿಗೆ ಬಹಳ ಕಷ್ಟವಾಗಿತ್ತು. ಜೀವನದುದ್ದಕ್ಕೂ ಅನಾರೋಗ್ಯದ ಕಾಟ, ಹಣಕಾಸಿನ ಚಿಂತೆ ಅವರಿಗೆ ಅಂಟಿದವು.

ಆದರೆ ಅವರು “ಮಾಧುರಿ” ಯ ಸಂಪಾದಕರಾಗಿದ್ದಾಗ ಅವರೊಡನೆ ಇದ್ದ ಮಿರ್ಜಾ ಮಹಮ್ಮದ್ ಆಸ್ಕರಿ ಎಂಬವರು ಪ್ರೇಮಚಂದ್ ರ ವಿಷಯ ಹೀಗೆ ಬರೆದಿದ್ದಾರೆ:

“ನಾನು ಈ ಎರಡು-ಮೂರು ವರ್ಷಗಳ ಅವಧಿಯಲ್ಲಿ  ಅವರನ್ನು ಯಾವಾಗಲೂ ಹಸನ್ಮೂಖಿಯಾಗಿಯೇ ಕಂಡಿದ್ದೇನೆ. ಅವರು ಕೋಪ ಮಾಡಿಕೊಂಡದ್ದನ್ನು ಕಾಣಲೇ ಇಲ್ಲ……. ಅವರಿಂದ ಅವರ ಸಂಗಾತಿಗಳೆಲ್ಲ ನಗುನಗುತ್ತ ಇರುತ್ತಿದ್ದರು.”

ಜೈನೆಂದ್ರ ಎಂಬುವರು ಅವರ್ನ್ನು ಮೊಟ್ಟಮೊದಲು ತಾವು ಕಂಡ ಅನುಭವವನ್ನು ವರ್ಣಿಸಿದ್ದಾರೆ. “ಮನೆಯಲ್ಲಿ ಓರಣವಿರಲಿಲ್ಲ. ಸಾಮಾನುಗಳು ಎಲ್ಲಿಲ್ಲಿಯೋ ಬಿದ್ದಿದ್ದವು. ಅಂಗಳದಲ್ಲಿ ನೀರು ನಿಂತಿತ್ತು……. ಆದರೆ ಅನಂತರ ನನಗೆ ಆ ಮನೆ ಬೇರೆಯವರದು ಎಂಬ ಸಂಗತಿಯೇ ಮರೆತುಹೋಯಿತು. ಎಲ್ಲ ಕೆಲಸವನ್ನು ಬಿಟ್ಟು ಪ್ರೇಮಚಂದ್ ರು ನನ್ನ ಜೋತೆಗೆ ಮಾತನಾಡಲು ಕುಳಿತರು. ಏಳು, ಏಳೂವರೆ, ಎಂಟು ಗಂಟೆಯಾಯಿತು. ಮಾತಿನ ಧಾರೆ ನಿಲ್ಲಲಿಲ್ಲ. ನಾನು ಪ್ರಪಂಚವನ್ನೇ ಮರೆತಿದ್ದೆ”

ಅಪೂರ್ವ ವ್ಯಕ್ತಿತ್ವ ಪ್ರೇಮಚಂದ್ ರದು.

ಅವರದು ಬಹು ದಿಟ್ಟ, ಸ್ವತಂತ್ರ ಮನೋಭಾವ. ಅವರು ಅಧ್ಯಾಪಕರಾಗಿದ್ದಾಗ ಶಾಲೆಗೂ ಕಲೆಕ್ಟರನ ಮನೆಗೂ ನಡುವೆ ಒಂದು ರಸ್ತೆ ಇದ್ದಿತು. ಅಲ್ಲಿಯೇ ಕಲೆಕ್ಟರನು ಸಂಜೆ ಅಡ್ಡಾಡುವುದು. ರಸ್ತೆಯ ತುದಿಗೆ ಪ್ರೇಮಚಂದ್ ರ ಮನೆ. ಕಲೆಕ್ಟರನು ಸಂಜೆ ಹೋಗುವಾಗ ಪ್ರೇಮಚಂದ್ ರು ಏನನ್ನಾದರೂ ಓದುತ್ತಿರುವರು. ಕಲೆಕ್ಟರನ ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಒಂದು ದಿನ ಕಲೆಕ್ಟರ ಅವರನ್ನು ಕೇಳಿದ: “ನಾನು ಪ್ರತಿನಿತ್ಯ ಇಲ್ಲಿಯೇ ಹೋಗುತ್ತೇನೆ; ನೀನು ಎದ್ದು ಬಂದು ನಮಸ್ಕಾರ ಮಾಡುವುದಿಲ್ಲ. ಏಕೆ?”

ಬಡ ಉಪಧ್ಯಾಯ ಪ್ರೇಮಚಂದ್ ರು ಜಿಲ್ಲೆಯ ದೊರೆ ಎನ್ನಿಸಿಕೊಂಡ ಕಲೆಕ್ಟರನಿಗೆ ಹೇಳಿದರು: “ನನ್ನ ಕೆಲಸ ನನಗಿದೆ. ರಸ್ತೆಯಲ್ಲಿ ಹೋಗುವ ಪ್ರತಿಯೊಬ್ಬನಿಗೆ ನಮಸ್ಕಾರ ಹೇಳುವುದು ನನ್ನ ಕೆಲಸವಲ್ಲ. ಅವನು ಸರ್ಕಾರದ ಅಧಿಕಾರಿಯೇ ಆಗಿರಲಿ, ನನಗೇನು?”

ಕಥೆ, ಕಾದಂಬರಿಗಳ ಜಗತ್ತು

ಪ್ರೇಮಚಂದ್ ರು ಆಧುನಿಕ ಭಾರತದ ಮೊದಲ ಪಂಕ್ತಿಗೆ ಸೇರಿದ ಸಾಹಿತಿಗಳು.

ಪ್ರೇಮಚಂದ್ ರು ಜನಜೀವನದಲ್ಲಿ ಒಂದಾಗಿ ಬೆರೆತು ಬಾಳಿದ ಮಧ್ಯಮ ವರ್ಗಕ್ಕೆ ಸೇರಿದ ಹಳ್ಳಿಯ ಗ್ರಹಸ್ಥ. ಆದ್ದುದುರಿಂದಲೇ ಅವರು ಕಥೆ, ಕಾದಂಬರಿಗಳಲ್ಲಿ ಜೀವನದ ಯಥಾರ್ಥ ಚಿತ್ರಣವನ್ನು ಮೂಡಿಸುವುದರಲ್ಲಿ ಯಶಸ್ವಿಗಳಾದರು.

ನಮ್ಮ ಬಾಳು ಸಮಸ್ಯೆಗಳಿಂದ ತುಂಬಿಹೊಗಿದೆ. ಎಂತಹ ಶಿಕ್ಷಣ ಪಡೆಯಬೇಕು, ಎಂತಹ ಕೆಲಸ ಮಾಡಬೇಕು, ನಮ್ಮ ಸುತ್ತಮುತ್ತಲಿನ ಜನರೊಡನೆ ಹೇಗೆ ನಡೆದುಕೊಳ್ಳಬೇಕು, ಸಮಾಜದಲ್ಲಿ ನಮ್ಮ ಸ್ಥಾನವೇನು, ನಮ್ಮ ಹಕ್ಕುಗಳೇನು, ಹೊಣೆ ಏನು, ದೇಶಕ್ಕೆ ನಾವು ಸಲ್ಲಿಸಬೇಕಾದ ಋಣ ಏನು ಎಲ್ಲ ಪ್ರಶ್ನೆಗಳನ್ನೂ ಪ್ರತಿ ವ್ಯಕ್ತಿಯೂ ಕೇಳಿಕೊಳ್ಳಬೇಕು, ಉತ್ತರಗಳನ್ನು ಕಂಡುಕೊಳ್ಳಬೇಕು. ಪ್ರೇಮಚಂದ್ ರು ಎಲ್ಲ ಸಮಸ್ಯೆಗಳನ್ನು ಗುರುತಿಸಿದ್ದಾರೆ, ಪ್ರತಿ ಸಮಸ್ಯೆಯನ್ನು ಓದುಗರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವಂತೆ ನಿರೂಪಿಸಿದ್ದಾರೆ, ಸಮಸ್ಯೆಗೆ ಉತ್ತರವೇನು ಎಂದೂ ಸೂಚಿಸಿದ್ದಾರೆ.

ಒಂದೊಂದು ಸಮಸ್ಯೆಯ ಮೇಲೆ ಹಲವಾರು ಕಥೆಗಳನ್ನೂ ಬರೆದಿದ್ದಾರೆ.

ನಮ್ಮ ಸಮಾಜ ಎರಡು ಹೋಳಾಗಿ ಹೋಗಿದೆ. ಒಂದು ದೊಡ್ಡ ಸಮುದಾಯ ದುಡಿಮೆಯಲ್ಲಿ ತೊಡಗಿದೆ. ದುಡಿಮೆ ಮಾತ್ರ ಈ ಶ್ರಮಜೀವಿಗಳ ಸೊತ್ತು. ಆದರೆ ದುಡಿಮೆಯ ಫಲ ದುಡಿಯದಿರುವ ಅಲ್ಪಸಂಖ್ಯಾತರಾಗಿರುವವರ ಸೊತ್ತಾಗಿದೆ. ಶ್ರಮಜೀವಿಗಳ ಗುಂಪಿನಲ್ಲೇ ರೈತರು, ಅವರಿಗೆ ಸಹಾಯಕರಾಗಿರುವ ಕೂಲಿಗಳು, ಕಾರ್ಖಾನೆಗಲ ಕೆಲಸಗಾರರು ಮುಂತಾದವರೆಲ್ಲ ಬರುತ್ತಾರೆ. ಪ್ರೇಮಚಂದ್ ರಿಗೆ ಇದನ್ನು ಕಂಡರಾಗದು. ಆದ್ದರಿಂದಲೇ ಶ್ರಮವನ್ನು ಧಿಕ್ಕರಿಸುವ, ಶ್ರಮೋಪಜೀವಿಗಳನ್ನು ಸಮರ್ಥಿಸುವ ಧರ್ಮ, ನ್ಯಾಯ, ಶಾಸನ ಎಲ್ಲಕ್ಕೂ ವಿರುದ್ಧವಾಗಿ ಹೋರಾಟ ನಡೆಸಿದ್ದಾರೆ. ಅವರ ಒಂದು ಕೃತಿಯಲ್ಲಿ ಒಬ್ಬ ಮನುಷ್ಯ ಹೇಳುತ್ತಾನೆ. : “ನಾವು ದೊಡ್ದವರೆನ್ನಿಸಿಕೊಳ್ಳುವ ಜನರು ಸ್ವಲ್ಪ ಲಕ್ಷ್ಯ ಕೊಟ್ಟರೆ ಈ ದೀನ ದುಃಖಿಗಳೇ ಅವರನ್ನು ದೊಡ್ಡವರನ್ನಾಗಿ ಮಾಡಿದರೆಂದು ಅವರಿಗೆ ಗೊತ್ತಾಗುತ್ತದೆ.

ಇಂತಹ ದೊಡ್ಡ ಭವನಗಳನ್ನು ತಮ್ಮ ಜೀವನವನ್ನೇ ಪಣಕಿಟ್ಟು ಮಾಡುವವರು ಯಾರು? ಈ ಬಟ್ಟೆಯ ಕಾರ್ಖಾನೆಗಳಲ್ಲಿ ದುಡಿಯುವವರು ಯಾರು? ಬೆಳಗ್ಗೆ ಹಾಲು ಬೆಣ್ಣೆ ತೆಗೆದುಕೊಂಡು ಬಂದು ಬಾಗಿಲಲ್ಲಿ ನಿಂತು ಕೂಗುವವರು ಯಾರು?…. ಕಸ ಗುಡಿಸುವವರು ಯಾರು? ….ಪಟ್ಟಣದ ಮುಕ್ಕಾಲು ಪಾಲು ಜನ ಕಾಲು ಭಾಗ ಜನರಿಗಾಗಿ ತಮ್ಮ ರಕ್ತವನ್ನು ಸುಟ್ಟುಕೊಳ್ಳುತ್ತಾರೆ.: “ನಮಕ್ ಕಾ ದರೋಗಾ”, “ಸಜ್ಜನತಾ ಕಾ ದಂಡ್”, “ದೇಶಭಕ್ತ” ಮುಂತಾದ ಕಥೆಗಳಲ್ಲಿ “ಕರ್ಮಭೂಮಿ”, ರಂಗಭೂಮಿ”, “ಪ್ರೇಮಾಶ್ರಮ”, “ಗಬನ್”, “ಗೋದಾನ್” ಮುಂತಾದ ಕಾದಂಬರಿಗಳಲ್ಲಿ ಈ ಆರ್ಥಿಕ ವ್ಯವಸ್ಥೆಯ ಬಗ್ಗೆ ಪ್ರೇಮಚಂದ್ ರ ಉಗ್ರ ವಿಚಾರಗಳನ್ನು ನೋಡಬಹುದು.

“ನಮಕ್ ಕಾ ದರೋಗಾ” ಕಥೆಯಲ್ಲಿ ಆಲೋಪಿದೀನ್ ಎಂಬ ದೊಡ್ಡ ಮನುಷ್ಯ ಕುಲೀನ. ಆದರೆ ಉಪ್ಪಿನ ಕಾಳಸಂತೆಯ ಕದೀಮ. ಲಂಚ ಅವನಲ್ಲಿದ್ದ ಅಸ್ತ್ರ. ಈ ಅಸ್ತ್ರದಿಂದ ಏನನ್ನು ಬೇಕಾದರೂ ಸಾಧಿಸಬಹುದು, ಯಾರನ್ನು ಬೇಕಾದರೂ ಒಲಿಸಿಕೊಳ್ಳಬಹುದು ಎಂಬ ಧೃಢವಿಶ್ವಾಸ ಅವನದು. ಆದರೆ ಅವನು ನಿಷ್ಠಾವಂತನಾದ “ನಮಕ್ ಕಾ ದರೋಗಾ” ವಂಶೀಧರನೆಂಬ ಯುವಕ ಅಧಿಕಾರಿಯ ಕೈಗೆ ಸಿಕ್ಕಿಬಿಳುತ್ತಾನೆ. ಅಲೋಪಿದೀನ್ ವಂಶೀಧರನನ್ನು ಬುಟ್ಟಿಗೆ ಹಾಕಿಕೊಳ್ಳಲು ತುಂಬ ಹೊಗಳುತ್ತಾನೆ. “ನಮ್ಮ ಪಾಲಿಗೆ ನೀನೇ ಸರ್ಕಾರ”, ಈ ಘಾಟಿನ ಮೂಲಕ ಹೋಗುವಾಗ ಇಲ್ಲಿಯ ದೇವರನ್ನು ಮರೆಯಲಾದೀತೆ? ಎಂದು ಹೇಳುತ್ತಾ ನೂರು ರೂಪಾಯಿ ಲಂಚ ಕೊಡಲು ಹೋಗುತ್ತಾನೆ. ವಂಶೀಧರ ಅದನ್ನು ಧಿಕ್ಕರಿಸುತ್ತಾನೆ. ಕೊನೆಗೆ ಸಾಹುಕಾರ ಅವನ ಆದರ್ಶ ದಿಟ್ಟತನಕ್ಕೆ ಹೆದರಿ ಐವತ್ತು ಸಾವಿರ ರೂಪಾಯಿಗಳವರೆಗೂ ಲಂಚ ಕೊಟ್ಟು ಮಣಿಸಲು ವ್ಯರ್ಥವಾಗಿ ಪ್ರಯತ್ನಿಸುತ್ತಾನೆ. ಆದರೆ ಆ ವ್ಯಕ್ತಿ ನ್ಯಾಯಾಲಯದ ಮುಂದೆ ಬಂದಾಗ ವಕೀಲರು ಬಂದು ಅವನ ಪರ ವಾದಿಸುತ್ತಾರೆ. ನ್ಯಾಯಾಧೀಶರು ಪ್ರಾಮಾಣಿಕವಾಗಿ ನಡೆದುಕೊಂಡ ಅಧಿಕಾರಿಯನ್ನೇ ನಿಷ್ಠೂರನಾಗಿ ನಡೆದುದಕ್ಕೆ ದಂಡಿಸುತ್ತಾರೆ. ಹೀಗೆ ಕೆಲಸವನ್ನು ಕಳೆದುಕೊಂಡು ಮನೆಗೆ ಬಂದ ಯುವಕ ಈ ಸಮಾಜವನ್ನು ಕುರಿತು ಏನು ಭಾವನೆ ಹೊಂದಬಹುದು?

ಪ್ರೇಮಚಂದ್ ರು ಈ ಕಥೆಯಲ್ಲಿ ಅದೆಷ್ಟು ಜಾಣ್ಮೆಯಿಂದ ಲಂಚಗುಳಿಗಳ, ಅವರ ಬಾಲಬಡುಕರ, ಅವರಂತೆ ಜೀವನವನ್ನು ನಡೆಸುವವರ ವಿಚಾರವನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ! ಲಂಚ ತೆಗೆದುಕೊಳ್ಳುವ ಜನ ಅದನ್ನು “ಹರಾಮ್ ಕೇ ಪೈಸೆ” (ಮೋಸದ ದುಡ್ಡು) ಅನ್ನುವುದೇ ಇಲ್ಲ. ಅದು ದೇವರು ಕೊಡುವ ಫಲ. ಸಂಬಳ ಮನುಷ್ಯ ಕೊಡುತ್ತಾನೆ. ಆದ್ದರಿಂದ ಅದು ಹುಣ್ಣಿಮೆ ಚಂದ್ರನಂತೆ ಒಂದು ದಿನ ಕಾಣಿಸಿಕೊಂಡು ಮರುದಿನವೇ ಕಣ್ಮರೆಯಾಗುತ್ತದೆ. ಅದೇ ಬತ್ತದ ಸೆಲೆ- ಹರಿಯುವ ತೊರೆ ಲಂದ್ಚ. ದಿನನಿತ್ಯದ ಅವಶ್ಯಕತೆಯನ್ನು ಪೂರೈಸುತ್ತದೆ. ಹೀಗೆ ಲಂಚ ತೆಗೆದುಕೊಳ್ಳುವವರು ಭಾವಿಸುತ್ತಾರೆ.

ವೈಶಿಷ್ಟ್ಯ

ಹೀಗೆ ಅವರು ಬಡವರ, ಬಲ್ಲಿದರ ಜೀವನದ ವಿವಿಧ ಮನೋಧರ್ಮವನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ. ಪ್ರೇಮಚಂದ್ ರು ಮುಟ್ಟದ ಸಮಸ್ಯೆ ಇಲ್ಲ: ಚಿತ್ರಿಸದಿರುವ ವ್ಯಕ್ತಿಗಳಿಲ್ಲ. ಅವರ ಕಾದಂಬರಿಗಳೆಲ್ಲವೂ ಸಮಸ್ಯೆಗೆ ಮೀಸಲು. ಒಂದಲ್ಲ ಒಂದು ಸಮಸ್ಯೆಯ ಸುತ್ತಲೂ ಘಟನೆಗಳನ್ನು ಹೆಣೆದಿರುತ್ತಾರೆ. ಪ್ರಾಯಶ: ಹಿಂದಿಯಲ್ಲಾಗಲಿ, ಉರ್ದುವಿನಲ್ಲಾಗಲಿ ಬಂದ ಮೊಟ್ಟ ಮೊದಲನೆಯ ಸಾಮಾಜಿಕ ಕಾದಂಬರಿ ಪ್ರೇಮಚಂದ್ ರ “ಸೇವಾದನ್”. ಪ್ರೇಮಚಂದ್ ರ “ರಂಗಭೂಮಿ” ಕಾದಂಬರಿಯ ನಾಯಕ ಸೂರದಾಸ ಒಬ್ಬ ಭಿಕ್ಷುಕ. ಅವನ ಹೃದಯದಲ್ಲಿ ಆತ್ಮಗೌರವವಿದೆ, ಔದಾರ್ಯವಿದೆ. ಹೊರಗಿನ ಜನ ಕಾರ್ಖಾನೆ  ಸ್ಥಾಪಿಸುವೆವೆಂದು ಬಂದು ಭೂಮಿ ಕೊಳ್ಳುತ್ತಾರೆ. ಅವರಿಂದ ಹಳ್ಳಿಗೆ ಜೂಜು ಹೆಂಡ ಎಲ್ಲ ಕಾಲಿಡುತ್ತದೆ. ಕಾರ್ಖಾನೆಯ ಕೆಲಸಗಾರರಿಗೆ ಮನೆ ಕಟ್ಟಲು ಹಳ್ಳಿಯವರನ್ನು ಹೊರಕ್ಕೆ ನೂಕುತ್ತಾರೆ. ಸೂರದಾಸ ಪಟ್ಟಣಕ್ಕೆ ಹೋಗಿ ತನ್ನ ಹಳ್ಳಿಯ ಜನರಿಗೆ ಆದ ಅನ್ಯಾಯವನ್ನು ಸಾರುತ್ತಾನೆ. ಕಡೆಗೆ ಜನರಿಗೆ ಆದ ಅನ್ಯಾಯವನ್ನು ಸಾರುತ್ತಾನೆ. ಕಡೆಗೆ ಸುಡುತ್ತಿರುವ ತನ್ನ ಗುಡಿಸಿಲನಲ್ಲಿ ಸಾಯುತ್ತಾನೆ. “ಗಬನ್” ಕಾದಂಬರಿಯಲ್ಲಿ ಒಡವೆಗಳಿಗಾಗಿ ಆಸೆ ಪಡುತ್ತಿದ್ದ ಯುವತಿ ದೇಶದ ನಾಯಕಿಯಾಗುತ್ತಾಳೆ. ಅವರ ಪ್ರಸಿದ್ಧ ಕಾದಂಬರಿ “ಗೋದಾನ್” ದಲ್ಲಿ ಕೆಲವರು ಬುದ್ಧಿವಂತರು, ಸ್ವಾರ್ಥಿಗಳು ಜಮೀನುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುವವರ ಶ್ರಮವನ್ನು ಬಳಸಿಕೊಂಡು ಅವರ ರಕ್ತದಿಂದ ತಾವು ಹೇಗೆ ಕೊಬ್ಬುತ್ತಾರೆ ಎಂದು ತೋರಿಸಿದೆ. ನಮ್ಮ ಸಮಾಜದಲ್ಲಿ ಒಂದು ಗುಂಪು ನೂರಾರು ವರ್ಷಗಳಿಂದ ಬಡತನದಲ್ಲೇ ಇದೆ, ದುಡಿಯುತ್ತಲೇ ಇದೆ. ಈ ಗುಂಪಿನ ಪ್ರತಿನಿಧಿ ಹೋರಿ. ಇಷ್ಟು ಅನ್ಯಾಯ, ಕಷ್ಟ, ತುಳಿತಗಳಿಗೆ ಸಿಕ್ಕಿದ್ದರೂ ಅವನ ಮನಸ್ಸು ಉದಾರವಾದದ್ದು.

ಸಾಹಿತ್ಯದಿಂದ ವ್ಯಕ್ತಿಯನ್ನೂ. ಸಮಾಜವನ್ನೂ ಉತ್ತಮಗೊಳಿಸುವುದು ಪ್ರೇಮಚಂದ್ ರ ಗುರಿ. ಗುರಿ ಸಾಧನೆಯಲ್ಲಿ ಅವರು ಯಾರನ್ನೂ ಅನುಕರಿಸಿ ನಡೆದವರಲ್ಲ. ತಮ್ಮ ದಾರಿಯನ್ನು ತಾವೇ ಕಂಡುಕೊಂಡವರು. ಸಾಮಾಜಿಕ ಕಾದಂಬರಿಗಳನ್ನೂ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದು ಮಾತ್ರವಲ್ಲ “ಪ್ರೇಮಾ”, “ಸೇವಾಸದನ್”, “ಪ್ರೇಮಾಶ್ರಮ”, ವರದಾನ”, ರಂಗಭೂಮಿ”, “ಕಾಯಕಲ್ಪ”, “ನಿರ್ಮಲಾ”, “ಕರ್ಮಭೂಮಿ”, ಪ್ರತಿಜ್ಞಾ”, “ಗಬನ್”, “ಗೋದಾನ್”, ಎಂಬ ಕಾದಂಬರಿಗಳನ್ನೂ ಸುಮಾರು ಇನ್ನೂರೈವತ್ತು ಕಥಗಳನ್ನು ಬರೆದಿರುವರು, “ರಾಮಚರ್ಚಾ”, ಮನಮೋದಕ”, “ನಾಯಿಯ ಕಥೆಗಳು”, “ಕಾಡಿನ ಕಥೆಗಳು”, ಮುಂತಾಗಿ ಮಕ್ಕಳ ಸಾಹಿತ್ಯವನ್ನು ಬರೆದು ಅವರರಾಗಿರುವರು.

ಇದು ಸಾಹಿತ್ಯಇದು ಜೀವನ

ಸಾಹಿತ್ಯವನ್ನು ಕುರಿತು ಅವರು ಹೇಳಿದರು: “ಹಣ ಸಂಪತ್ತು ಬಯಸುವವರಿಗೆ ಸಾಹಿತ್ಯ ಮಂದಿರದಲ್ಲಿ ಸ್ಥಾನವಿಲ್ಲ. ಸೇವೆಯಿಂದಲೇ ತಮ್ಮ ಜೀವನ ಸಾರ್ಥಕ ಎಂದು ತಿಳಿದ ಹೃದಯದಲ್ಲಿ ನೋವಿನ ಯಾತನೆ ಮತ್ತು ಪ್ರೀತಿಯ ಆವೇಗವನ್ನು ತುಂಬಿಕೊಂಡ ಉಪಾಸಕರು ಮಾತ್ರ ಇಲ್ಲಿ ಬೇಕು.”

“ನಾವು ಸಮಾಜದ ಧ್ವಜವನ್ನು ಹಿಡಿದು ಹೊರಟ ಸಿಪಾಯಿಗಳು”.

ಪಂಡಿತ ಬನಾರಸ್ ದಾಸ್ ಚತುರ್ವೇದಿಯವರಿಗೆ ಒಮ್ಮೆ ಬರೆದರು:

“ನನಗೆ ಬೇರೆ ಯಾವ ಆಸೆಯೂ ಇಲ್ಲ. ಸದ್ಯಕ್ಕೆ ಸ್ವರಾಜ್ಯದ ಹೋರಾಟದಲ್ಲಿ ನಾವು ಗೆಲ್ಲಬೇಕೆಂಬ ಒಂದೇ ಆಕಾಂಕ್ಷೆ ಇದೆ. ಸಂಪತ್ತು ಅಥವಾ ಕೀರ್ತಿಯ ಆಸೆ ನನಗಿಲ್ಲ. ಊಟಕ್ಕೆ ಸಿಕ್ಕೇ ಸಿಕ್ಕುತ್ತದೆ. ಕಾರು-ಬಂಗಲೆಗಳ ಆಸೆ ನನಗಿಲ್ಲ. ಆದರೆ ಸ್ವರಾಜ್ಯವನ್ನು ಸಂಪಾದಿಸುವ ಉದ್ದೇಶವಿರುವ, ಉತ್ತಮವಾದ ಮೂರು-ನಾಲ್ಕು ಪುಸ್ತಕಗಳನ್ನು ಬರೆಯುವ ಆಸೆ ನನಗಿದೆ. ಸುಮ್ಮನೆ ಕೂಡುವುದೂ ನನಗೆ ಸರಿ ಹೋಗುವುದಿಲ್ಲ. ಸಾಹಿತ್ಯಕ್ಕಾಗಿ ಮತ್ತು ನನ್ನ ದೇಶಕ್ಕಾಗಿ ಏನಾದರೂ ಮಾಡುತ್ತಿರಬೇಕು ಎನ್ನಿಸುತ್ತದೆ.