ಸುಟ್ಟು ಬಿಡು ಇರುವೆಲ್ಲ ಪತ್ರಗಳ ;
ಕಿತ್ತೆಸೆಯೊ ಒಂದೊಂದಾಗಿ ಬೇರೂರಿರುವ
ಹೂಗಿಡವ ಬುಡಸಮೇತ.
ಹುಗಿದುಬಿಡು ನೆಲದಲ್ಲಿ ಉಳಿದೆಲ್ಲ
ಸಂಬಂಧಗಳ ; ಯಾವ ನಾಯಿವಾಸನೆಗೂ
ಸಿಗಬಾರದದರ ಹಳೆ ಮೂಳೆ.
ಲೊಚಗುಟ್ಟಬಾರದು ಹಲ್ಲಿ; ಅನುರಣಿತ-
ವಾಗಬಾರದು ಯಾವ ಕೊಠಡಿ ಮೂಲೆಗಳಲ್ಲು
ನೀನೆಂದೊ ಕೀ ಕೊಟ್ಟು ಮರೆತ ಗಡಿಯಾರ-
ದಲಾರಂ. ನೆರಳುಳಿಯಬಾರದು ಏನೂ
ಕೊನೆಗೆ ಒಂದಿಷ್ಟಾದರೂ.
ಬೂದಿ, ಬರಿ ಬೂದಿಯುಳಿದರದನೂ ತೇಲಿಬಿಡು
ಕಾವೇರಿನದಿಯಲ್ಲಿ, ಹೋಗಲಿ ದೂರ
ಎಲ್ಲಾದರೂ.

ಮತ್ತೆ ಬೆನ್ನಟ್ಟಿ ಬಂದೀತು ಆ ಕಡೆಯಿಂದ
ಜಡೆಯ ಕಂಪಿನ ಗಾಳಿ ; ಕಿಟಕಿ ಬಾಗಿಲ ಮುಚ್ಚಿ
ಅಗುಳಿ ಹಾಕು. ಹಿಂದೆ ಹೂ ಚೆಲುವ ಕುಡಿದ ದುಂಬಿಗಳು
ಗರಿಬಿಚ್ಚಿ ಝೇಂಕರಿಸಿಬಿಟ್ಟಾವು ಹಳೆಯ ನೆನಪ,
ಮತ್ತೆ ಆಷಾಢದಾಕಾಶದಲ್ಲಿ ಯಕ್ಷನ ಜೊತೆಗೆ
ತೇಲಿ ಬಂದೀತಯ್ಯ ವಿರಹ ತಾಪ.