ನಲಿವಿನ ಕೊರಳಿನ ಬಣ್ಣದ ಸೀರೆ;

ಹೊಂದಾವರೆ ಹೂವಿನ ಗೆರೆಯಂಚು.
ಬೆನ್ದಿರುಹುತೆ ಕುಳಿತಿದ್ದಳು ನೀರೆ:
ಸಾಗಿದ್ದಿತು ಹಸುಳೆಯ ತಾಯಿಯ ಹಾಲೊಳಸಂಚು!

ಬಾಚಿದ ಹಿಂದಲೆ ಕದ್ದಿಂಗಳ ಹೆಡೆ;
ಹಾವೆನಲಿಳಿದಿದೆ ಬೆನ್ನಿನ ಮೇಲ್ ಜಡೆ.
ಮುಡಿಯಲಿ ಮೂಬಣ್ಣದ ಹೂಕುಚ್ಚು-
ಕೆಂಪಿದೆ, ಬಿಳಿಯಿದೆ, ಹಸುರಿದೆ-ಕಬ್ಬಿಗನೆದೆಮೆಚ್ಚು!

ಮೂದಿಂಗಳ ಕಂದನ ಹೂಗಾಲು,
ಒಳಸಂಚನು ಹೊರಗೆಡಹುವವೋಲು,
ಅಂಚಲದೊಳಗಿಂ ಕಟಿತಟದಲ್ಲಿ
ಇಣಿಕಿರೆ-ಮುಳುಗಿದೆ ನಾನೂ ಅಮೃತದ ಸುಖದಲ್ಲಿ!