‘ಬೃಂದಾವನಕೆ ಹಾಲನು ಮಾರಲು

ಹೋಗುವ ಬಾರೇ ಬೇಗ, ಸಖಿ!’
‘ಬೃಂದಾವನದಿ ಹಾಲನು ಕೊಳ್ಳುವರ್
ಆರಿಹರೇ ಹೇಳಿಂದುಮುಖಿ?’

‘ಗೋವನು ಕಾಯುವ ಗೋವಿಂದನಿಹನೇ,
ಹಾಲನು ಕೊಳ್ಳುವ, ಕೇಳೆ ಸಖಿ!
ಚಿನ್ನವ ಕೊಡನೇ, ರನ್ನವ ಕೊಡನೇ,
ತನ್ನನೆ ಕೊಡುವನು ಬಾರೆ, ಸಖಿ!

ಕಣ್ಣನು ಮೋಹಿಪ ಪೀತಾಂಬರವನು,
ಬಣ್ಣದ ಬಳೆಗಳ ಧರಿಸು, ಸಖಿ;
ಚೆನ್ನವ ಮೋಹಿಸುವೆದೆಯನು ಹಾರವು
ಸಿಂಗರಿಸಲಿ, ಹೇ ನಳಿನಮುಖಿ!

ಝಣಝಣವೆನ್ನಲಿ ನೂಪುರ, ಗೋಪಿ,
ಹಣೆಯೊಳು ಚಂದನ ರಂಜಿಸಲಿ!
ತೊಂಡೆಯ ಹಣ್ಣನು ತುಟಿಗಳು ನಗಲಿ,
ವದನವು ಮೀರಲಿ ತಾವರೆಯ!

ಯಮುನಾತೀರದೊಳಲೆಯುವ ಬಾರೇ
ಹಾಲುಬೇಕೆ ಹಾಲೆಂದು, ಸಖಿ;
ಹಾಲನು ಮಾರುವ ನೆವದಿಂದ ಹರಿಯ
ಮೋಹಿಸಿ ಕರೆಯುವ ಬಾರೆ, ಸಖಿ!’

‘ಹಾಲ ನಿವೇದಿಸಿ ಆತ್ಮವನರ್ಪಿಸಿ
ಮುಕ್ತಿಯ ಹೊಂದುವ, ಸೌಮ್ಯಮುಖಿ!
ಹಾಲನು ಮಾರಿ ಹರಿಯನು ಕೊಳ್ಳುವ
ನಾವೇ ಧನ್ಯರು, ಕಮಲಮುಖಿ!

ನಮ್ಮೀ ಲಾಭವ ಮೀರುವ ಲಾಭವು
ಬೇರಿನ್ನಿಹುದೇ, ಇಂದುಮುಖಿ?
ಬೃಂದಾವನಕೇ ಹಾಲನು ಮಾರಲು
ಹೋಗುವ ಬಾರೇ ಬೇಗ, ಸಖಿ!

ಶ್ರೀ ಮಜುಂದಾರರ ಒಂದು ಚಿತ್ರದಿಂದ ಪ್ರೇರಿತವಾದದ್ದು