ದಮ್ಮಯ್ಯ, ಬಾ ಬೇಗ, ಓ ಎನ್ನ ಹೃದಯೇಶ,

ಕಾದು ದಣಿದೆನು; ಇನ್ನು ತಡೆಯಲಾರೆ.
ಹರಿಯುತಿದೆ ನರಗಳಲಿ ಬೆಂಕಿಯುರಿ; ಹರಣವನೆ
ಕೊರೆದಿದೆ ನಿರೀಕ್ಷಣೆಯ ನಿಶಿತಧಾರೆ.

ನೀನು ತಡಮಾಡಿದರೆ ಬಾಳೆಲ್ಲ ಸಂಕುಚಿಸಿ,
ಕುಗ್ಗಿಸುವುದಾತ್ಮವನು ವಿರಹಭಾರ.
ನೀನು ಬಂದರೆ ಬಳಿಗೆ ಬಾಳರಳಿ ಹಬ್ಬುವುದು;
ಆತ್ಮವಿಕಸನವಲ್ತೆ ಮಿಲನಸಾರ?