ಮಲಗು ಮನದನ್ನೆ, ಮಲಗೆಲೆಗೆ ಚೆನ್ನೆ:

ಕೊಳದ ತಾವರೆಯ ಹೃದಯದಲಿ ತುಂಬಿ
ಸೆರೆಯಾಗಿದೆ.
ಮಲಗು ಮನದನ್ನೆ, ಮಲೆಯ ಜೇನನ್ನೆ,
ದಣಿದ ರವಿಬಿಂಬವದ್ರಿಮಂಚದಲಿ
ಮರೆಯಾಗಿದೆ.

ಮಲಗು ಮನದನ್ನೆ, ನನ್ನಿನಿಯ ಕನ್ನೆ,
ಬನಬನವ ತೇಲಿ ಅಲೆವ ತೆಂಗಾಳಿ
ತಂಪಾಗಿದೆ.
ತಿಂಗಳಿನ ಸೊಂಪು; ತೇನೆಯುಲಿಯಿಂಪು;
ಕೇತಕಿಯ ಧೂಳಿ ತುಂಬಿದೀ ಗಾಳಿ
ಕಂಪಾಗಿದೆ.

ಮಲಗು ಮನದನ್ನೆ, ಮಲಗೆನ್ನ ಚೆನ್ನೆ;
ನಿನ್ನ ಹೂಗೆನ್ನೆಗಳಲೆನ್ನ ಕೆನ್ನೆ
ಒಂದಾಗಲಿ.
ಮಲಗು ಮಲಗೆನ್ನೆ, ಬಾಳಿರುಳ ಜೊನ್ನೆ:
ಅಂದಿಂದು ನಿನ್ನೆ ನಾಳೆಯಲಿ ಸೊನ್ನೆ;
ಇಂದಾಗಲಿ!