ಕೆಂಪು ಗುಲಾಬಿಯ ಚೆಂದುಟಿ ಚೆಲುವೆ,

ಎಂತು ನಿನ್ನನು, ಹೇಳು, ಗೆಲುವೆ?

ಸುಗ್ಗಿಯ ಹೊಸಸಿರಿ ಹೂಗಳ ಕೊಯ್ದು
ತರಲೇನ್ ಒಂದಿನಿಮಾಲೆಯ ನೆಯ್ದು?
ಕಾಜಾಣವು ಕೋಗಿಲೆಗಳ ಬೇಡಿ
ಕಲಿತಿಂಚರದಿಂ, ನಿನ್ನನೆ ನೋಡಿ,
ತುಟಿಯಿಂ ಸೋರುತಲಿರೆ ಸವಿಜೇನು
ಮುದ್ದಿನ ಹೆಸರನು ಕರೆಯಲೆ ಏನು?
ಸೊಬಗಿನ ಕದನದಿ ಮದನನ ಕೊಂದು,
ಸುರಲೋಕ ವರಗಂಗೆಯ ಮಿಂದು,
ನಂದನದಮೃತದ ಫಲವನೆ ತಿಂದು,
ನಿನ್ನೆಡೆ ನಿಂತರೆ, ‘ರತಿ, ಬಾ!’ ಎಂದು?
ದಾನವೊ ಮಾನವೊ ಪ್ರಾಣವೊ ಏನು?
ಯಾವುದರಿಂದೆನಗೊಲಿಯುವೆ ನೀನು?

ಕೆಂಪು ಗುಲಾಬಿಯ ಚೆಂದುಟಿ ಚೆಲುವೆ,
ಎಂತು ನಿನ್ನನು, ಹೇಳು, ಗೆಲುವೆ?