ಎಂತು ನೂಂಕಲಿ ನಾಳೆಯೊಂದು ದಿನವನು, ಚೆನ್ನಾ,

ಯುಗವಾಗಿ ಕಾಣುತಿದೆ ನೀನಿಲ್ಲದೆ?
ನಾಳೆ ಕಳೆದರೆ ನಾಡಿದೈತರುವೆ ನೀನೆಂದು,
ಕಾಣುತಿದೆ ನಾಳೆ ಪಾತಾಳದಂತೆ!

ಹಗಲುಗನಸಿನ ಬನದಿ ಚರಿಸಿ ನಿನ್ನನು ಹುಡುಕಿ
ಕಾಣದಿರೆ ಮರಗಳಡಿ ವಿರಹದಿಂದ
ಕುರುಳ ನೇಣನು ಬಿಗಿದು ಕನಸು ಮರದಾ ಹರೆಗೆ
ಬಾಳ್ಗೊಲೆಯ ಗೈಯಲೇಂ ಮುನಿಸಿನಿಂದ?

ನಿನ್ನ ಮೈಯನೆ ನೆನೆದು, ನಿನ್ನ ಹೆಸರನೆ ಕರೆದು,
ನೂರು ಸಾವಿರ ಸಾರಿ ಬರೆದು ಬರೆದು
ವಿರಹಯಾತನೆಯಿಂದ ಹರಿವ ಕಂಬನಿಯಿಂದ
ಮತ್ತೆಮತ್ತಳಿಸಲೇನೆನ್ನ ಚೆನ್ನಾ?