ಏಕಾಂತವಿದು ಸಹಿಸಲಾರದಿದೆ; ಬಾರಯ್ಯ,

ಸೌಂದರ್ಯ ಮೂರುತಿಯೆ, ಹೃದಯವನಕೆ.
ಬರಲು ನೀಂ ಚೈತ್ರಪಕ್ಷಿಯ ಗಾನ ಬಂದಂತೆ
ನಂದನಾನಂದವೈತಹುದು ಮನಕೆ!

ಕೆನ್ನೆ ಕೆಂದಳಿರ ತಾ, ನಗೆಯ ನಲ್ಮುಗಳ ತಾ,
ತೊಂಡೆವಣ್ದುಟಿಯ ತಾ, ಲತೆಮೆಯ್ಯ ತಾ!
ರವಿಯುದಯದಂತೆ ಬಾ, ಶಶಿಯುದಯದಂತೆ ಬಾ,
ಯೌವನೋದಯದಂತೆ ಬಾರಯ್ಯ ಬಾ!

ಮೌನವಿದು ಬಿರಿದೊಡೆದು ಬಹುಗಾನ ತಾನಾಗಿ
ಪ್ರವಹಿಸಲಿ ಸುಪ್ರೇಮದಮರಸಿಂಧು!
ನಿಶ್ಚಲತೆ ನರ್ತಿಸಲಿ ಪ್ರೇಮತಾಂಡವನಾಗಿ;
ಬಾರಯ್ಯ, ಚಿರ ರಸ ನವೀನ ಬಂಧು!