ಕವಿಯ ಹೃದಯ ಜ್ವಾಲಾಮುಖಿ;

ಪ್ರೇಮವದರ ಉದರ ಶಿಖಿ.
ಮಧುರ ಭಾವ, ಕಾಯ್ದ ‘ಲಾವ’
ಕರಗಿ ಹರಿವ ತೆರದಲಿ,
ಧಮನಿಧಮನಿಗಳಲಿ ತೂರಿ
ಧಗಿಪುದಿರಿವೊಲುರಿಯ ಚೂರಿ
ರಾಗ ರತಿಯ ಭರದಲಿ!

ಅಲ್ಪ ಸ್ವಲ್ಪ ಸಾಲದದಕೆ;
ಬೇಕು ನಿನ್ನ ಇಡಿಯ ಬದುಕೆ.
ಮೊನ್ನೆ ಕಣ್ಣುತೆರೆದ ಹೆಣ್ಣೆ
ಸುಂಕ ಕೊಟ್ಟ ಮಾತ್ರಕೆ
ಹೇರಿನ ಹೊರೆ ಹಗುರವಾಯ್ತೆ?
ಬಡ್ಡಿ ತೆತ್ತರೂನವಾಯ್ತೆ
ಋಣದ ಮೂಲಗಾತ್ರಕೆ?

ತ್ಯಾಗಕಿಂತ ಭೋಗವಿಲ್ಲ,
ಭೋಗಕಿಂತ ತ್ಯಾಗವಿಲ್ಲ;
ಪೂರ್ಣ ತ್ಯಾಗ ಪರಮ ಭೋಗ
ಪ್ರೇಮಾಮೃತ ಲೋಕದಿ!
ರಸಪ್ರಣಯ ಪರಸ್ಪರತೆ
ಪುರುಷಾರ್ಥಂ ಬತ್ತದೊರತೆ
ದಾಂಪತ್ಯದ ನಾಕದಿ!

ಕವಿಯ ಶಾಂತಿ ಬರಿಯ ಭ್ರಾಂತಿ;
ಅವನ ಬದುಕನಂತ ಕ್ರಾಂತಿ!
ಬಾಯಾರಿಕೆಗೆಣೆ ಕೋರಿಕೆ
ಮರುಭೂಮಿಯ ಚಿರತೃಷೆ:
ಹನಿಹನಿಯನೆ ಹೀರಿದರೂ
ಕಡಲೇಳೂ ಆರಿದರೂ
ತಣಿಯದೊಲವಿನೆದೆಮಸೆ!