ದೇವರಮನೆ ಕಡೆ ನೋಡುತ್ತಿರೆ ನಾ

ಧ್ಯಾನಾನಂದದಲಿ
ಬಂಧಿಸಿ ಹೃದಯವ ಬಂದುದು ಗುರುಕೃಪೆ
ಸುಂದರಿಯಂದದಲಿ!
ನಿರಿನಿರಿ ಮೆರೆದುದು ನೀಲಿಯ ಸೀರೆ:
ಶರಧಿಯನುಟ್ಟಳೆ ಭೂಮಿಯ ನೀರೆ?

ಮಂಗಳದಾರತಿ ಬಲಗೈಯಲ್ಲಿ,
ಹೂವೆಡಗೈಯಲ್ಲಿ;
ಮಾಂಗಲ್ಯದ ತೋಳ್ಸೆರೆ ಕೊರಳಲ್ಲಿ,
ಬಿಡುಗಡೆ ಎದೆಯಲ್ಲಿ!
ಚಂದ್ರಮುಖದಲ್ಲಿ ತಾರೆಯ ಬಿಂದು;
ಚಂದ್ರೋದಯದಲಿ ಮಿಂದುದೆ ಸಿಂಧು?

ತುಟಿ ಕಾವಲ್ ನಿಂದುದು ನಂದನಕೆ;
ಕದವಾದುದು ಕಣ್ಣು;
ಮೋಹಿಸಿ ಭಕ್ತಿಯ ಮಧು ಬಂಧನಕೆ
ಕೃಪೆ ಆದುದು ಹೆಣ್ಣು!
ಗುಡಿಯಿಂದೀ ಪರಿ ತಾನೊಲಿದಾಕೆ
ನಡೆತರೆ, ಬೇರೆಯ ಗುರುಕೃಪೆ ಬೇಕೆ?