ಸೊಬಗನೇಕೆ ಹಳಿಯುತಿರುವೆ,

ಬಣಗು ಬೈರಾಗಿ?
ಸೊಬಗು ದೇವನಂಶವಲ್ತೆ,
ಹೇಳು, ಓ ತ್ಯಾಗಿ?

ನಿರಾಕಾರವಾದುದೆಮ್ಮ
ಮನಕೆ ಬರಿಯ ಸೊನ್ನೆ ಬೊಮ್ಮ!
ತುದಿಯೊಳೆಮಗೆ ಬರಲು ಸಾವು
ನಿರಾಕಾರವಾಗೆ ನಾವು,
ಸೊಬಗೆ ನಿರಾಕಾರವಾಗಿ
ದೇವನಹುದು ಕಣಾ, ಚಾಗಿ!

ಪರಮಪುರುಷ ಸೃಷ್ಟಿರೂಪಿ;
ಅವನ ಹಳಿಯುವವನೆ ಪಾಪಿ!
ಗಿಡಮರಗಳು ಹೂವು ಬಳ್ಳಿ
ಮೆರೆವ ಗಿರಿಯ ನೆತ್ತಿಯಲ್ಲಿ
ನೇಸರುದಯವಾಗುತಿಹನು,
ನೋಡು ಬಾ; ದೇವನವನು!

ನಗಪರಿವೃತ ಕಂದರದಲಿ
ತಲೆಯನೊಲೆವ ಗದ್ದೆಗಳಲಿ
ಭಾವಲಹರಿಗಳನೆ ಹೋಲಿ
ತೀಡುತಲಿದೆ ಮುದ್ದುಗಾಳಿ:
ಹಸುರ ನಡುವೆ ಬಿಳಿಯ ಚುಕ್ಕಿ,
ನೋಡು ಬಾ! ಬೆಳ್ಳೆಹಕ್ಕಿ!

ಬಯಲಿನಲ್ಲಿ ಹಸುರುಮೇವು
ಮೇಯುತಿರುವ ಹಿಂಡುಗೋವು
ಚಲನೆಯಿಲ್ಲವೆನ್ನುವಂತೆ
ಚಲಿಸುತಿಹವು ಚಿತ್ರದಂತೆ:
ಆಲಿಸದೋ-ನೂರು ಪ್ರಾಣಿ:
ಆದರೇನು?-ಒಂದೆ ವಾಣಿ!

ದನವ ಕಾವ ಚೆಲುವು ಹೆಣ್ಣು:
ಅವಳ ಕೂದಲವಳ ಕಣ್ಣು,
ಮೂಗು, ಬಾಯಿ, ಗಲ್ಲ, ಕೆನ್ನೆ-
ರಾಧೆಗೇನು ಕಡಿಮೆ ಎನ್ನೆ!
ನೂರು ವೇಷ, ನೂರು ಭಾವ;
ನೂರು ರೀತಿ ಬಹನೊ ದೇವ!