ಬೆನಕ ಚೌತಿಯ ಚೆಲುವ ಶಿಶು ಶಶಿ

ಅಂತರಿಕ್ಷದ ವಕ್ಷದಿ
ಘನಪಯೋಧರ ಪಾನಸುಖವಶಿ
ಶುಕ್ಲಸುಂದರ ಪಕ್ಷದಿ.

ಅರಿಲಗೊಂಚಲ ತೆರನ ತೆನೆಯಾ
ಕೃತ್ತಿಕೆಯ ಬೆಳೆ ಹೊನ್ನನು
ಸವರಿ ಕವರಲು ಬಂದ ಭಾದ್ರನ,
ಪಿಡಿಪು ಮರೆಯಪ್ಪಂತೆ ಪಿಡಿದಿಹ,
ಕೈಯ ಕುಡುಗೋಲನ್ನನು.

ರತಿಯನೆಚ್ಚರಗೊಳಿಸೆ ಯತಿಯಲಿ
ಮದನ ಕಿವಿವರೆಗೆಳೆದನು;
ಜೊನ್ನವಿಲ್ಲಿನ ಜೊನ್ನ ನಾರಿಯ
ವೃತ್ತವಾದುದು ಆ ಧನು:
ಶಿವನ ಹೃದಯವ ಹೊಕ್ಕ ಹೂವಿನ
ಸರಳು ಸಂದುದು ಬೇಳ್ವೆಗೆ;
ಭಸ್ಮವಾದನು ಅತನು, ಬಾನಿನ
ಬೂದಿಮುಗಿಲಿನ ಬಾಳ್ವೆಗೆ;
ವ್ಯೋಮಕೇಶನ ಜಟೆಗೆ ಸಿಲ್ಕಿತೊ
ವೃತ್ತಗೊಂಡಾ ಜ್ಯಾಧನು:
ಕಾಣು ಕಾಣ್ ಅದೆ ಮೇಲೆ ತೇಲಿದೆ
ಬೆನಕ ಚೌತಿಯ ಚಂದ್ರನು!