ಬಾನಿಗೆ ಹಿಡಿದಿದೆ ಕಿಕ್ಕಿರಿ ಮಳೆಮೋಡದ ಮಬ್ಬು;

ಗಂಟಿಕ್ಕಿದವೋಲಿದೆ ಸೃಷ್ಟಿಯ ಕರಿಹುಬ್ಬು.
ಮಿಂಚಿನ ಗುಡುಗಿನ ಗಾಳಿಯ ಸುಳಿವಿನಿತಿಲ್ಲ;
ಚಿತ್ರಸ್ಥಗಿತವೊ ಎಂಬಂತಿದೆ ಜಗವೆಲ್ಲ.
ಗಿಡಮರವೆಲ್ಲಾ ನಿಶ್ಚಲ ಮೇಣ್ ಸ್ತಬ್ಧ;
ಸದ್ದಿದ್ದರು ಅದು ಹನಿ; ಕಡಲಾಗಿದೆ ನಿಶ್ಶಬ್ದ.
ಹಿಡಿದು ಹೊಯ್ಯುತಿದೆ ಜಡಿಸೋನೆ,
ಬೇಸರು ಕರೆಕರೆ ಹಿಡಿಸುವ ಎಡೆಬಿಡದೆಯೆ ಸೋರುವ ಸೋನೆ!

ಪ್ರಿಯನಾಗಮನವ ಹಾರೈಸುತ ಮನೆಹೊಸ್ತಿಲ ಮೇಲೆ
ಕುಳಿತಿರುವಳು ದೀನಾನನೆ ಮಲೆನಾಡಿನ ಬಾಲೆ.
ಆ ಹೆಗ್ಗಾಡಿನ ಕಣಿವೆಯ ಮಧ್ಯೆ
ಆ ಒಂಟಿಯ ಹುಲ್ಮನೆ ಮಾಡುತಲಿದೆ ನಿದ್ದೆ.
ನೆರೆಹೊರೆಯಿಲ್ಲ; ಜೊತೆಗಾರಿಲ್ಲ;
ತಾನೊಬ್ಬಳೆ ಎಲ್ಲ!
ನಿಡು ನೋಡುತ್ತಿರೆ ಉತ್ಕಂಠಿತೆ, ಆ ನಾರಿ,
ಹಾವಿನವೊಲು ಹರಿಯುತ್ತಿದೆ ಕಣಿವೆಯ ಕಾಲ್ದಾರಿ
ಹಳುವಿನೊಳಲ್ಲಲ್ಲಿಯೆ ಮರೆಯಾಗುತೆ ತೂರಿ:
ಶೂನ್ಯತೆ ಮಾತ್ರೆವೆ, ಹಾ, ಅದರೊಳ್ ಸಂಚಾರಿ!