ಷೋಡಶ ಚೈತ್ರದ ಸುಂದರಿ ನೀನು

ಕಾಮನಬಿಲ್ಲಿನ ಬಣ್ಣದ ಬೋನು;
ನಿನ್ನಾ ಕಣ್ಣು
ದೀಹದ ಹಣ್ಣು;
ನನ್ನೆದೆ ಹಕ್ಕಿಯೊ ಬಲೆಯಲಿ ಮೀನು!

ಸೋರ್ಮುಡಿಯದೆ ಕರ್ಮುಗಿಲಿನ ಬಾನು:
ಕಡೆಗಣ್ ನೋಟದಿ ಮಿಂಚಲು ನೀನು
ಚುಂಬನ ದಾನಕೆ
ಪ್ರೇಮದ ಪಾನಕೆ
ಕಾತರವಾಗಿಹ ಜಾತಕ ನಾನು!

ರಸಮಯ ಶೃಂಗಾರಾನನೆ, ನೀನು
ಚೈತ್ರದ ಹುತ್ತದ ಹುಣ್ಣಿಮೆ ಜೇನು.
ಪಂಕಜನೇತ್ರೆ,
ಮಧುನವಪಾತ್ರೆ,
ದುಮುಕುವ ದುಂಬಿಯ ನಾಲಗೆ ನಾನು!

ವಿದ್ಯುದ್ ಭೀಷಣ ಮೋಹಿನಿ, ನೀನು
ಕದ್ದಿಂಗಳ ಕಗ್ಗತ್ತಲ ಬಾನು;
ಅಲ್ಲುರಿವುಳ್ಕೆ
ಒಲ್ಮೆಯ ಬಾಳ್ಕೆ;
ರಾಗದ ಬೆಂಕಿಯ ಬೂದಿಯೆ ನಾನು!

ಶಾಶ್ವತ ಸೌಂದರ್ಯದ ಖನಿ ನೀನು,
ನಶ್ವರ ಚಾಂಚಲ್ಯದ ಹನಿ ನಾನು;
ಚೆಂದುಟಿ ಮುತ್ತು
ಗರಳದ ತುತ್ತು;
ನೀನೆನ್ನಯ ಸರ್ವಸ್ವದ ಮೃತ್ಯು!