ನೀನೆನ್ನ ವೈಣಿಕಂ; ನಾ ನಿನ್ನ ವೀಣೆ.
ನನ್ನ ಗಾನಕೆ ಅನ್ಯ ಪ್ರೇರಣೆಯ ಕಾಣೆ:
ಗಾನಕಾಗಿಯೆ ನೀನು ವೀಣೆಯನು ರಚಿಸಿದಯ್;
ಜಡದ ಜಂತ್ರದಿ ಜೀವವನು ಹಡೆದೆಯಯ್;
ಯುಗ ಯುಗ ತಪಂಬಡುತೆ ದೂರದೀ ಶ್ರುತಿಗಾಗಿ
ತರುಲೋಹದೊಡಲಿದಂ ಕೃತಿಗೆಯ್ದೆಯಯ್!
ನಿರ್ಜೀವ ತರುವಿನಾ ನೀರಸದ ಲೋಹದಿಂ
ಜೀವರಸಮಯ ಗಾನವಹುದೆಂದರಿತರಾರ್?
ಸಂಭವಮಸಂಭವಮ್ ಎಂಬುದಿಲ್ಲಯ್ ನಿನಗೆ
ಕವಿವಿರಾಟ್ ಹೇ ವೈಣಿಕ ವರೇಣ್ಯ!
Leave A Comment