ನಿನ್ನ ಮೇಲೆ ನನ್ನ ಹುಚ್ಚು
ಎನಿತು ದಿನವೊ ನಾನು ಕಾಣೆ!
ನಂದುವನಿತರೊಳಗೆ ಕಿಚ್ಚು
ಮುಗಿದರಡುಗೆ ಲೇಸು, ಜಾಣೆ!
ಬೆಳಗಿನಲರಿನಂತೆ ಚೆಲುವು:
ಏನೊ ಎಂತೊ ಬರಲು ಸಂಜೆ!
ಹುಲ್ಲು ಬೆಂಕಿಯಂತೆ ಒಲವು:
ಬಗ್ಗನುರಿದು ಬೂದಿ, ಬಂಜೆ!
ಮಾಸಬಹುದು ಕೆನ್ನೆಸೊಂಪು,
ಕೆಡಲು ಬಹುದು ಕಣ್ಣಕಾಂತಿ,
ಬಾಡಬಹುದು ತುಟಿಯ ಕೆಂಪು:
ಆಗ ಒಲುಮೆ ಬರಿಯ ಭ್ರಾಂತಿ!
ಎಲೆಗಳಿರದ ಬರಲು ಮರದ
ನೆರಳಿನೆಲುಬುಗೂಡಿನಂತೆ
ನನ್ನ ಪ್ರೇಮ ಬರಿಯ ಕಾಮ!
ಮುಂದೆ ಮಾಡಬೇಡ ಚಿಂತೆ.
ಹುಲ್ಲುಬೆಂಕಿ ಉರಿವತನಕ
ಅದರ ಕ್ಷಣಿಕ ಉಷ್ಣದಲ್ಲಿ
ಕುದಿಯಲೆಮ್ಮ ಕಾಮಕನಕ
ಪ್ರೇಮ ಎಂಬ ಹೆಸರಿನಲ್ಲಿ!
Leave A Comment