ಯಾವ ದೂರದ ಸ್ವಪ್ನಸ್ವರ್ಗದಲಿ, ಕಲ್ಪನೆಯ

ವರ್ಣಮಯ ನಂದನೋದ್ಯಾನದಲಿ, ಕಲ್ಪತರು
ತಲದಲ್ಲಿ ಹರಿವ ಮಂದಾಕಿನಿಯ ತೀರದಲಿ
ರಾಜಿಸುವ ಪಳುಕುವಾಸರೆಯಾಸನದ ಮೇಲೆ
ಪ್ರೇಮಿಕ ಧ್ಯಾನದಲಿ ತಲ್ಲೀನಳಾಗಿರುವೆ,
ಓ ಎನ್ನ ಜೀವನ ಪ್ರೇಯಸಿಯೆ? ಸುರನದಿಯ
ಬೆಳ್ನಗೆಯು ಬೆಳ್ನೊರೆಯ ಶಿರದ ತೆರೆಯೊಲು ಬಂದು
ಪದುಮಗಳ ಸೋಂಕಿನಲಿ ಪದುಮವಾಗಿಹ ನಿನ್ನ
ಮೆಲ್ಲಡಿಗಳನು ಮುಟ್ಟಿ ಮುತ್ತಿಟ್ಟು ಹರುಷದಲಿ
ಹರಿಯುತಿದೆ ಮುಂದೆ, ಓ ಎನ್ನಿನಿಯ ರೂಪಸಿಯೆ!
ಪುಷ್ಪಪರಿಮಳವೆತ್ತ ಮಂದಪವನನು ನಿನ್ನ
ಕೇಶರಾಶಿಯ ಕೆದರಲೋಸುಗವೆ ಲೀಲೆಯಲಿ
ಉನ್ಮತ್ತನಾಗಿಹನು, ಮಾನಸಿಕ ಸುಂದರಿಯೆ!
ಹೊಂಗರಿಯ ಹಕ್ಕಿಗಳು ನಿನ್ನ ಸುತ್ತಲು ಹಾರಿ
ಇನಿದನಿಯ ಬೀರುತಿವೆ. ಮರಬಳ್ಳಿಗಳು ನಿನ್ನ
ಚರಣತಲದಲಿ ತಮ್ಮ ಕುಸುಮನೈವೇದ್ಯವನು
ಅನವರತ ಅರ್ಪಿಸಿವೆ. ಓ ಎನ್ನ ಮೋಹಿನಿಯೆ,
ಎಲ್ಲ ಋತುಗಳ ಎಲ್ಲ ಬಣ್ಣಗಳು, ನೋಡಲ್ಲಿ,
ನಿನ್ನ ವಸನಾಂಚಲದಿ ಇನಿತು ತಾವನು ಬೇಡಿ
ಕಾದಿವೆ ತಪಂಗೈದು!…
..ಇಂತಿರಲು ನೀನಲ್ಲಿ,
ಆ ದೂರದಾ ಸ್ವಪ್ನಸ್ವರ್ಗದಲಿ, ಮರ್ತ್ಯಕ್ಕೆ
ನಿಲುಕದ ಅತೀತದಲಿ; ನಾನಿಲ್ಲಿ ಮರ್ತ್ಯದಲಿ,
ಈ ಸ್ಥೂಲ ಭುವನದಲಿ, ಬಂಧನದ ಭವನದಲಿ
ಸೆರೆಯಾಗಿ ಕ್ರಂದಿಸುತ್ತಿಹೆ ನಿನ್ನ ಹಾರೈಸಿ,
ಓ ಎನ್ನ ಜೀವನ ಪ್ರೇಯಸಿಯೆ, ರೂಪಸಿಯೆ,
ಮೋಹಿನಿಯೆ, ಮಾಧುರಿಯೆ, ಮಾನಸಿಕ ಸುಂದರಿಯೆ!
ನೀನಿಲ್ಲದೀ ತಿರೆಯು ಜಡವಾಗಿ ಸೆರೆಯಾಗಿ
ಹೊರೆಯಾಗಿ ಬರಿಯ ಮರುಧರೆಯಾಗಿ ತೋರುತಿದೆ.
ವಿರಹದಲಿ ನನ್ನೆದೆಯು ಬಿರಿಯುತಿದೆ; ಕಣ್ಣೀರು
ಸುರಿಯುತಿದೆ; ಮೈಗೆ ಉರಿಹೊತ್ತುತಿದೆ. ನೀನಿನ್ನು
ಬಾರದಿರೆ ಭಸ್ಮವಾಗುವೆ ನಾನು. ಆ ಬೂದಿ
ಗಾಳಿಯಲಿ ತೇಲಿ, ನದಿಯಲಿ ಹರಿದು ನಿನ್ನೆಡೆಗೆ,
ನಿನ್ನ ತಪವನು ಕೆಡಿಸಿ ಎಂದಿಗೂ ಮುಗಿಯದಿಹ
ಸೀಮೆಯಿಲ್ಲದ ರೋದನಕೆ ನಿನ್ನ ತಳ್ಳುವುದು.-
ನಿನ್ನ ಧ್ಯಾನವು ಸಾಕು; ಬಾ ಬೇಗ ಮರ್ತ್ಯಕೆ!
ಬಂದೆನ್ನನಪ್ಪು! ತುಟಿಯೊತ್ತಿನಲಿ ತವಿಸೆನ್ನ
ಎದೆಯ ಬಿರುಬೇಗೆಯನು! ನೀನು ಬರಲಾರದಿರೆ,
ನಿನ್ನ ಹಿರಿಮೆಗೆ ಕಿರಿಯ ತಿರೆ ಸಾಲದಾಗುವೊಡೆ
ನನ್ನನಲ್ಲಿಗೆ ಕರೆದುಕೋ-ಮುತ್ತನಿಡು, ದೇವಿ!
ಬರಲಿ ಕಾಮನ ಬಿಲ್ಲು, ಹೋಗಲಿ ಹರಿದು ಕಾವಿ!