ಪಕ್ಕದಲಿ ಪವಡಿಸಿರೆ

ಅಕ್ಕರೆಯ ಚೆಲುವೆ:
ಅಪ್ಸರಿಯರೆದೆಸಿರಿಯ
ಸಕ್ಕರೆಯ ಗೆಲುವೆ;
ಇಂದ್ರ ಸಿಂಹಾಸನವ
ಸವಿ ಸೂರೆಗೊಳುವೆ;
ಬೇಸರಿಕೆಯಸುರಿಯನು
ಹೊಡೆಸೀಳಿ ಕೊಲುವೆ!

ಮಿಸುನಿ ಬೆಟ್ಟವನೇರಿ
ಬಸವಳಿದು ಬಾಯಾರಿ
ರಸದ ಮಡುವನೆ ಹೀರಿ
ತಣಿದು ನಲಿವೆ!
ನಂದನವನಲೆದಾಡಿ
ಸುರತರುವನಳ್ಳಾಡಿ
ಸ್ವರ್ಧುನಿಯನೀಸಾಡಿ
ಕುಣಿದು ಉಲಿವೆ!

ಹೊಸ ಮಳೆಯ ಮಿಂದೆಸೆವ
ಹಸುರು ಮಲೆಗಳ ಮೇಲೆ
ನೇಸರುದಯದ ರುಚಿಯ
ಸವಿವೆ ಕಂಡು;
ಸರ್ವ ಕವಿಗಳ ಕಾವ್ಯ
ಶೃಂಗಾರ ರಂಗದಾ
ಸಂಸಾರ ಸಾರವನು
ಸುಲಿವೆನುಂಡು!