ಪಡುವಣ ಬಾನಿನ ನೀಲಿಯ ಹಣೆಯಲಿ

ಬಿದಿಗೆಯ ರೇಖಾಚಂದ್ರಮನು
ನವವಧು ವದನದ ಮುಗುಳ್ನಗೆಯಂದದಿ
ಮೆರೆವನು ಮೋಹವನು.

ನೈಶಾಕಾಶದ ಬಿತ್ತರದೆದೆಯಲಿ
ಕಿಡಿಕಿಡಿ ಕೆತ್ತಿದೆ ತಾರಾಳಿ;
ತರುವನ ಗಿರಿಧರೆ ಮೌನದಿ ಮುಳುಗಿವೆ
ಭಾವ ಸಮಾಧಿಯಲಿ!

ಉದ್ವೇಗವನರಿಯದ ಸಂತೃಪ್ತಿಯ
ನಿರುಪಮ ಔದಾಸೀನ್ಯದಲಿ
ತ್ರಿಜಗಜ್ಜೀವನವಾಹಿನಿ ಹರಿದಿದೆ
ಸುಖಮಯ ಸುಪ್ತಿಯಲಿ.

ಮೌನದ ಮಡಿಲಲಿ, ಹಸುರು ಹಸಲೆಯಲಿ
ಮಲಗಿರುವೆನು ನಾನೇಕಾಂಗಿ;
ನೀನೆಂದಿಗೆ ಐತರುವೆಯೊ ಎಂಬುವ
ಚಿಂತೆಯೆ ನಾನಾಗಿ.