ಬೆಳ್ದಿಂಗಳು ಹಾಲ್ ಚೆಲ್ಲಿದ
ಹುಣ್ಣಿಮೆಯಿರುಳಲ್ಲಿ
ಬನದಂಚಿನ ಹೊಳೆ ತುಂಗೆಯ
ಸಕ್ಕರೆ ಮರಳಲ್ಲಿ
ಓರೊರ್ವರೆ ನಾವಿರ್ವರು
ಸಿಂಗಾರದಿ ಕೂಡಿ
ನಲಿದಾಡುವ ಬಾ, ನಲ್ಲಳೆ,
ರಸದೋಕುಳಿಯಾಡಿ.
ಮೇಗಡೆ ಬಾನ್, ಕೆಳಗಡೆ ಕಾನ್,
ಜೊನ್ನದ ಜೇನ್ ನಡುವೆ;
ನಿನ್ನೊಳು ನಾನ್, ನನ್ನೊಳು ನೀನ್,
ನಮಗಿನ್ನೇನ್ ಗೊಡವೆ?
ಹೊನ್ನೊಲುಮೆಯ ಹೊಂಬೊನಲಲಿ
ತೇಲುವ ಬಾಳ್ನಾವೆ
ಆಲಿಂಗನದಾವರ್ತದಿ
ಮುಳುಗಿದರೇನ್ ಸಾವೆ?
Leave A Comment