ಮೈ ಚೆಲುವಿಗೆ ನೀನೊಲಿಯದಿರೆನ್ನ:

ಇಂದೋ ನಾಳೆಯೊ, ಓ ಮನದನ್ನ,
ಹಿಡಿವುದು ದೇಹಕೆ ಕಾಲದ ತುಕ್ಕು;
ತೆರೆತೆರೆ ತೋಡುವುದೊಡಲಲಿ ಸುಕ್ಕು.
ತುಟಿಗೆಂಪಳಿವುದು; ಬಾಡುವುದಕ್ಷಿ;
ನರೆವುದು ಕೂದಲು; ಯೌವನ ಪಕ್ಷಿ
ಗರಿಯುದುರಿಸುವುದು. ಹಿಡಿವುದು ಮುಪ್ಪು-
ಬಾಳ್‌ಸೊಗದಾನೆಯ ಕೆಡಹುವ ಕಪ್ಪು.
ಕೊರಳಿನ ಇನಿದಿನಿ ಕರ್ಕಶವಾಗಿ,
ಗೂನಾಗುವುದೈ ನಿಡುಬೆನ್ ಬಾಗಿ:
ಅದರಿಂದೊಲಿವೊಡೆ, ಓ ಎದೆಯನ್ನ,
ಮೈ ಚೆಲುವಿಂಗಾಗೊಲಿಯದಿರೆನ್ನ.