ಹೊಮ್ಮಿದೆಳೆಯ ಗರುಕೆ ಮೇಲೆ
ಚಿಮ್ಮಿ ಹುಲ್ಲೆಮರಿಯವೋಲೆ
ನನ್ನ ನೊಪ್ಪಿ ರಾಧೆಯಪ್ಪಿ
ಮುತ್ತಿಟ್ಟಳು ಕೆನ್ನೆಗೆ!
ಎಲ್ಲ ಬರೆದುಕೊಳುವ ವಿಧಿ,
(ನಲ್ಲೆಗಾಣ್ಕೆ ಪುಣ್ಯನಿಧಿ!)
ನಿನಗೆ ನನ್ನದೊಂದು ಮೊರೆ:
ಮುತ್ತುಕೊಟ್ಟುದನೂ ಬರೆ,
‘ರಾ-ಧೆ ನ-ನ್ನ ಕೆ-ನ್ನೆ-ಗೆ.’
“ಇವನು ಕೋಪಿ, ಇವನು ಪಾಪಿ”
ಸುಳ್ಳನೆ ಬರೆ, ನಿನಗೆ ಮಾಫಿ!
“ಇವಗೆ ಮೋಹ, ಭ್ರಾಂತಿ, ಭ್ರಮೆ!”
ಹ್ಞೂ ಆಗಲಿ! ಅದಕೂ ಕ್ಷಮೆ!
ಆದರೆನ್ನದೊಂದೆ ಮೊರೆ:
ಮುತ್ತುಕೊಟ್ಟುದನೂ ಬರೆ,
ರಾಧೆ ನನ್ನ ಕೆನ್ನೆಗೆ!
ಲೀಹಂಟ್ ಕವಿಯ ‘Rondeau’ ಎಂಬ ಕವನದ ಭಾವಾನುಕರಣ
Leave A Comment