ವಿಶ್ವದ ಕೇಂದ್ರದ ಬೃಂದಾವನದಲಿ,

ಜೀವನ ಜಮುನೆಯ ಕೂಲದಲಿ,
ರಾಗದ ಭೋಗದ ಮಧು ಸಂಸಾರದ
ಕದಂಬ ತರುವರ ಮೂಲದಲಿ,
ಬಿಸಿಲಿನ ನೆಳಲಿನ ಬಲೆಬಲೆ ನಲಿಯುವ
ರಂಗೋಲಿಯ ಶೀತಲ ಛಾಯೆಯಲಿ,
ಶುಕಪಿಕ ಸಂಕುಲ ತುಮುಲ ನಿನಾದದ
ಸಂಗೀತದ ಮಧುಮಯ ಮಾಯೆಯಲಿ;
ಹಚ್ಚನೆ ಮೆರೆದಿರೆ ವಸಂತ ಲೀಲೆ,
ಪಚ್ಚೆಯ ಹಸುರಿನ ಮೆತ್ತೆಯ ಮೇಲೆ
ನರ್ತಿಸುವನದೊ ತ್ರಿಭಂಗ ಮುರಾರಿ,
ತ್ರಿಲೋಕ ಮೋಹಕ ರಾಸ ವಿಹಾರಿ!

ಸಮುದ್ರ ಮುದ್ರಿತ ಗಿರಿಧರೆಯಂತೆ
ನೀಲ ದುಕೂಲದ ಶ್ಯಾಮ ಶರೀರಿ!
ಸಂಧ್ಯಾ ಸುಂದರ ದಿಗಂತದಂತೆ
ಉಜ್ವಲ ಘನ ವನಮಾಲಾ ಧಾರಿ!
ನಾಟ್ಯಂಗೈದಿದೆ ಪಿಂಛ ಕಿರೀಟ,
ಪ್ರೇಮಿಕ ಯೋಗಿಯ ಪಿಂಗಲ ಜೂಟ!
ಬಿಂಬಾಧರ ಚುಂಬಿತವಾ ವೇಣು
ರಾಧೆಯ ವಿರಹಕೆ ಕರುಬಿನ ನೇಣು!
ನಳಕೂಬರ ಮನ್ಮಥರವರೆಲ್ಲಿ?
ಸೌಂದರ್ಯದ ಸಾರವಿದೆಲ್ಲಿ?-

ಝಣಿರು ಝಣಿರು ಝಣಿಝಣಿರೆನೆ ಗೆಜ್ಜೆ
ಕುಣಿದು ಕುಣಿದು ಕುಣಿಕುಣಿದಿವೆ ಹೆಜ್ಜೆ!
ಪುಲ್ನವಿರ್ನಿಮಿರುತೆ ನಲಿದಿದೆ ಮಣ್ಣು!
ಮೈನವಿರ್ನಿಮಿರುತೆ ಹನಿತಿವೆ ಕಣ್ಣು!
ನೃತ್ಯಕೆ ಹೊಯಿಕೈ ಗಾನದ ಶೈಲಿ;
ಗಾನಕೆ ಹೊಯಿಕೈ ನೃತ್ಯದ ಶೈಲಿ!
ಪಿಳ್ಳಂಗೋವಿಯಿನುಗುತಿದೆ ಗಾನಂ
ಮಳೆಬಿಲ್ಲಿನ ಹೊಳೆಯನು ಹೋಲಿ!
ಸೃಷ್ಟಿಗೆ ಗಾನದ ಗಂಗಾ ಸ್ನಾನಂ!
ಕಾಣದೊ ಮುಳುಮುಳುಗಿದೆ ತೇಲಿ!

ನರ್ತಿಸಿ ಸುತ್ತಿದೆ ಗೋಪೀವೃಂದಂ
ಲಲನಾಕಾರದ ಪ್ರಣಯಾನಂದಂ!
ಹಗಲಿರುಳೆರಡೂ ಉಷೆ ಸಂಧ್ಯೆಯರಂ
ತಳ್ಕೈಸಿಳೆಯಂ ಭ್ರಮಿಪಂದದಲಿ,
ರಂಗು ರಂಗಿನ ಸೀರೆಯ ಸೊಬಗಿಂ
ಮೆರೆಯುವ ಹೂದೋಂಟದ ಚಂದದಲಿ,
ಜಗದೆದೆಯಲಿ ರತಿತೃಷ್ಣೆಯ ಕೆರಳಿಸಿ
ಕುಣಿಕುಣಿವರು ಚಕ್ರದ ಬಂಧದಲಿ!
ಮೃದುಪದ ವಿನ್ಯಾಸಕೆ ಬಳುಬಳುಕಿರೆ ಮೈ,
ಎಲರಲಿ ನಲಿಯುವ ಅಲರ್ವಳ್ಳಿವೊಲಿರೆ ಕೈ,
ಝಣಿರು ಝಣಿರು ಝಣಿಝಣಿರೆನೆ ಗೆಜ್ಜೆ
ಕುಣಿದು ಕುಣಿದು ಕುಣಿಕುಣಿದಿರೆ ಹೆಜ್ಜೆ,
ಗೋಪಿಯರಾದರು ತಿರುಗುವ ನೇಮಿ
ನೃತ್ತದ ವೃತ್ತಕೆ; ಕೇಂದ್ರಸ್ವಾಮಿ
ಶ್ರೀ ಕೃಷ್ಣನು ದಿವ್ಯಪ್ರೇಮಿ!

ಕರಿದುಂಬಿಯ ಪಡೆ ಮುಂಗುರುಳಿನ ಜಡೆ
ಹೆಡೆಯೆತ್ತಾಡುವ ಕಾಳಿಂಗನ ನಡೆ!
ಕೊಂಕಿದ ಹುಬ್ಬಿನ ಕಾಮನ ಬಿಲ್ಲಿಗೆ
ದೃಷ್ಟಿ ಮಯೂಖದ ಬತ್ತಳಿಕೆ.
ಬಿಂಕದ ಎದೆಗಡಲುಬ್ಬರವಿಳಿತಕೆ
ಸೃಷ್ಟಿಯ ಪ್ರಾಣದ ತತ್ತಳಿಕೆ!
ಮಧು ಮೃದು ಕೋಮಲ ಪದ ಚುಂಬನಕೆ
ತಲ್ಲಣಿಸಿದೆ ಭೂಮಿ!
ಹೆಜ್ಜೆಯ ಬಿಜ್ಜೆಯ ಗೆಜ್ಜೆಯ ನಾದಕೆ
ಗಾನ ತರಂಗಿತ ವೇಣು ವಿನೋದಕೆ
ಬ್ರಹ್ಮಾಂಡವೆ ಕಾಮಿ!

ಹಸುರು ಹಸಲೆಯಲಿ ಮೇಯುವ ಗೋವು
ಸೆರೆಯಾಗಿಂಪಿಗೆ ತೊರೆಯುತೆ ಮೇವು
ಕಿವಿಗಳ ನಿಮಿರಿಸಿ ಮೋರೆಯನೆತ್ತಿ,
ಕಂಡರಿಸಿದರೆನೆ ಕಲ್ಲನು ಕೆತ್ತಿ,
ನೋಡದೊ ನಿಂತಿವೆ ಸ್ವರವಶವಾಗಿ,
ಮೃತ್ಪಟ ಚಿತ್ರದಿ ಕೊರೆದಂತಾಗಿ,
ಸರಗೈದಿರೆ ಕೊಳಲಿನ ಯೋಗಿ!
ರಾಸಕ್ರೀಡೆಯ ನೋಡಲೈನಲು,
ಕೊಳಲಿಂಚರವನು ಕೇಳಲ್ಕೆನಲು
ಅದೊ ನಿಂತುದು ಯಮುನೆಯ ಹರಿಹೊನಲು,
ಗಾನಕೆ ಘನವಾಯ್ತೆಂಬಂತೆ!
ತೆರೆ ನೊರೆ ಕರುವಿಟ್ಟಂತಿರೆ ನೀರ್ವೊಳೆ
ಮೆರೆದಿದೆ ಬಣ್ಣದಿ ಬರೆದಂತೆ!
ಗಿರಿಕಾನನತತಿ ಬಾನ್ ಮುಗಿಲೆಲ್ಲಂ
ಕಿವಿಯಾಗಿವೆ ಮೈಮರೆತಂತೆ!

ಕೊಳಲಿನ ಮಂತ್ರದಿ ತ್ರಿಜಗಂ ಮುಗ್ಧ!
ಸೃಷ್ಟಿ ಸಮಸ್ತಂ ಭಾವಸ್ತಬ್ಧ!
ನಿಶ್ಚಲ ಚಿತ್ರಂ ನೋಡದೊ ಮತ್ತೆ
ರಸಸುಖದಿಂ ಸ್ಪಂದನಗೈಯುತ್ತೆ
ರಾಸ ವಿಲಾಸದ ಛಂದಃ ಪ್ರಾಣಕೆ
ಸಮರಸ ಲಾಸ್ಯವನಾಡುತಿದೆ;
ಭಾವಾತಪದಿಂ ಘನಿತಾನಂದದಿ
ಜೀವತರಂಗಿಣಿ ಮೂಡುತಿದೆ!
ಹರಿಯುತ್ತಿದೆ ಹೊಳೆ ನೊರೆನಗೆ ಬೀರಿ
ತರಂಗತಾಡನ ಘೋಷದಲಿ;
ರಾಜಿಸುತಿದೆ ಮಧು ಕಾನನ ರಾಜಿ
ತೀವಿದ ಪುಷ್ಪಾವೇಶದಲಿ;
ಮಳೆಬಿಲ್ಬಣ್ಣದಿ ಸುರಿಯಲು ತೊಡಗಿದೆ
ಹೂಮಳೆ ಸಮಸ್ತ ದೇಶದಲಿ!

ಬಹುವಿಧ ಸುಮಕುಲ ಗಂಧಸಮೀರಂ
ಚಲಿಸುತ್ತಿಹನಶರೀರ ಮಯೂರಂ!
ಅದೊ ಕುಣಿಯಲು ತೊಡಗಿದೆ ಗಿರಿಪಂಕ್ತಿ,
ಸಾನುಸ್ಥಾನದಿ ವಪ್ರಕ್ರೀಡೆಗೆ
ತೊಡಗಿದುವೋ ಎನೆ ದಿಗ್ದಂತಿ!
ತಾಂಡವಗೈದಿದೆ ಅದೊ ಅಂಭೋಧಿ,
ರಾಧಾಕೃಷ್ಣರ ರಾಸವಿಲಾಸದ
ರಸ ಪಾನಾನಂದೋನ್ಮಾದಿ!

ಭೂ ಗ್ರಹನಿಕರಂ ರವಿ ತಾರಾಳಿ
ರಾಸಕ್ರೀಡಾವೇಶವ ತಾಳಿ
ಯುಗಯುಗಯುಗದಿಂ ಗಿರ್ರನೆ ಸುತ್ತಿವೆ,
ಒಂದನ್ನೊಂದಂ ಸೆಳೆದಿವೆ, ಮುತ್ತಿವೆ,
ಎಂದೆಂದಿಗು ಬಿಡದಾಲಿಂಗನದಿ
ರಹಸ್ಯ ಛಂದೋ ಬಂಧನದಿ!

ನಿಲ್ಲಲ್ ಪ್ರಲಯಂ! ಚಲಿಸಲ್ ಸೃಷ್ಟಿ!
ನೃತ್ಯಗೀತಗಳ ಜೀವನ ತುಷ್ಟಿ!
ಅಣುಅಣುವಿಂ ನೀಹಾರಿಕೆವರೆಗೆ,
ತೃಣಕಣಕಣದಿಂ ಹಿಮಗಿರಿವರೆಗೆ,
ಎಲ್ಲೆಲ್ಲಿಯು ರಾಸಕ್ರೀಡೆ!

ಪ್ರಕೃತಿ ನಿಯಮಗಳೊ? ವಿದ್ಯುಚ್ಛಕ್ತಿಯೊ?
ಬಹುರೂಪಗಳಿವೆ! ಬಹುನಾಮಗಳಿವೆ
ಆದರೆ, ಆದರೆ-ಕಡೆಯಲಿ, ಎಲ್ಲಿಯು
ಎಲ್ಲೆಲ್ಲವು ರಾಸಕ್ರೀಡೆ!