ಯಾವ ಅತೀತದಿ ನಿರ್ಗುಣನಾಗಿಹೆ

ಓ ಮಮ ಪ್ರೇಮದ ಅತಿಥಿಯೆ ನೀಂ?
ಗುಣಮಯ ಮಾಯಾ ವನತರು ಮೂಲದಿ
ಕಾದಿಹೆ ವಾಸಕ ಸಜ್ಜಿಕೆ ನಾಂ!

ಕುರುಳನು ತಿದ್ದಿದೆ, ಹೆರಳನು ಹಾಕಿದೆ,
ಬೈತಲೆ ಬಾಚಿದೆ ನಿನಗಾಗಿ;
ಬಾನಿನ ಬಣ್ಣದ ನೀಲಿಯ ಸೀರೆಯ
ನೆರಿಗೆಯನುಟ್ಟಿಹೆ ನಿನಗಾಗಿ.
ತುಟಿ ಕೆಂಪಾಗಿದೆ ನಿನಗಾಗಿ;
ಕಣ್ಣೆವೆಯಿಕ್ಕದು ನಿನಗಾಗಿ.
ಒಲುಮೆಯ ಹೊನಲಿನ ರಭಸದ ಹೊಯ್ಲಿಗೆ
ಬಿರಿವೆದೆ ಕರೆಯುತ್ತಿದೆ ಕೂಗಿ!
ಪ್ರಾಣ ಪಕ್ಷಿ ತಾ ದೇಹಪಂಜರದಿ
ತುಡಿಯುತ್ತಿದೆ, ಹಾ, ಸೆರೆಯಾಗಿ!

ಕೈಯಲಿ ಹಿಡಿದಿಹ ಕುಸುಮಮಾಲಿಕೆಯು
ಬಿಸುಸುಯ್ಲಿಗೆ ಬಾಡುವ ಮುನ್ನ
‘ನೇತಿ’ಯ ನಿರ್ಗುಣ ಶೂನ್ಯವನುಳಿಯುತ
‘ಇತಿ’ಯಾಗೈತರು, ಓ ಚೆನ್ನ!