ಕಾದೆ ಕಾದೆ ಕಾದೆ ಕಾದೆ
ನೀನು ಮಾತ್ರ ಬರದೆ ಹೋದೆ,
ಓ ಎನ್ನ ರಾಧೆ!
ಮನದಿ ವಿರಹದುರಿಯು ತೋರೆ
ಕ್ಷಣವದೊಂದು ಯುಗವ ಮೀರೆ
ಓ ನನ್ನ ನೀರೆ!
ನವ ವಸಂತನಿಳೆಗೆ ಬಂದು
ಕುಸುಮ ನಿವೇದನವ ತಂದು
ವಿಹಂಗ ಗಾನದಿ
ಪ್ರೇಮಗೀತೆಗಳನು ಹಾಡಿ
ಮಥಿಸಲೆದೆಯ ನೃತ್ಯವಾಡಿ,
ತಾನತಾನದಿ;
ದೂರದುದಯ ಗಗನದಲ್ಲಿ
ಕುಂಕುಮ ಧೂಳಿಯನೆ ಚೆಲ್ಲಿ
ಉಷೆಯ ಮೂರುತಿ
ಜಗಕೆ ಜೀವರಸವ ತರಲು,
ಶಿಖರವನವನೇರಿ ಬರಲು
ಅರುಣ ಸಾರಥಿ;
ಪೂರ್ಣ ಸುಧಾಕರನ ಕಾಂತಿ
ಬನವ ತೊಯ್ಯಲಿಳೆಯ ಶಾಂತಿ
ಮೇರೆವರಿಯಲು,
ಕಾಣದುಲಿವ ತೇನೆಹಕ್ಕಿ
ಗಾನಮೇಘದಲ್ಲಿ ಸಿಕ್ಕಿ
ಸೋನೆಗರೆಯಲು;
ನಭವನೆಲ್ಲ ಮುಚ್ಚಿ ಮುಗಿಲು
ಸೋನೆ ಮಳೆಯ ಸುರಿವ ಹಗಲು
ಜೊತೆಯದಿಲ್ಲದೆ,
ಖಿನ್ನಮನವ ನಗಿಸಿ ನಲಿಸಿ,
‘ರನ್ನ’ ಎಂದು ಎದೆಯನೊಲಿಸಿ
ಒಲಿವರಿಲ್ಲದೆ;
ಪರ್ವತ ವನ ಕಂದರದಲಿ
ಸರೋವರದ ತೀರಗಳಲಿ
ನಿನ್ನನರಸಿದೆ;
ಒಮ್ಮೆ ಮೊರೆದು, ಒಮ್ಮೆ ಜರೆದು,
ಒಮ್ಮೆ ನಿನ್ನ ಕೂಗಿ ಕರೆದು
ಬರಿದೆ ಚರಿಸಿದೆ.
ಯಾವ ಯಮುನೆಯರೆಯ ಮೇಲೆ
ಕುಳಿತು ಹಾಡುತಿರುವೆ, ಬಾಲೆ?
ಓ ಎಲ್ಲಿ ಹೋದೆ?
ಯಮುನೆಯಾಗಿ ಹರಿದು ಬರುವೆ,
ತೆರೆಯ ಮುತ್ತು ಕೊಟ್ಟು ಕರೆವೆ,
ಬಾ ಎನ್ನ ರಾಧೆ!
Leave A Comment