ಪ್ರಣಯಿ ನಿಂತನು ಬಯಲಿನಲಿ ಪೂರ್ಣಿಮೆಯ ಶಶಿಯ

ಹಾರೈಸಿ: ಪಾಲ್ಗುಣದ ತಾರಾಖಚಿತ ನಿಶಿಯ
ಪೂರ್ವ ದಿಙ್ನೀಲಾಳಕಾಳಿಯಲಿ ತುಂಬುಪೆರೆ
ಜ್ಯೋತ್ಸ್ನಾ ಸುಧೌತ ಮಾಣಿಕ್ಯದೊಲು ಮೂಡಿಬರೆ
ಕತ್ತಲೆಯ ಮುಡಿಯಲ್ಲಿ ಮುಗಿಲ ಮಲ್ಲಿಗೆಗೊಂಡೆ
ಬೆಳ್ಳನೆ ಬೆಳಗುವಂತೆ, ತೇಲಾಡಿತೆಲ್ಲ ತಿರೆ
ಬೆಳ್ದಿಂಗಳಲಿ ಮಿಂದು! ಹಿಂಜಿದರಳೆಯ ಬಂಡೆ
ಬಾನ್ನೀಲಿ ನೀರಿನಲಿ ತೇಲ್ವಂತೆ ಬಿಳಿಮುಗಿಲು
ಮೆರೆಯೆ, ನಲಿದುದು ನಗುವ ಹುಣ್ಣಿಮೆಯಿರುಳ ಹಗಲು!
ತೀಡಿದುದು ತಂಬೆಲರು. ಪ್ರಣಯಿ ಪ್ರಿಯೆಯನು ನೆನೆದು,
ಕಲ್ಪನೆಯ ತೊಟ್ಟಿಲಲಿ ತೂಗುಯ್ಯಲೆಯ ತೊನೆದು,
ನಿಡುಸುಯ್ದು ನಡೆದು ತನ್ನೆಲೆವನೆಗೆ, ಹಾಸಿನಲಿ
ಮೈ ಚಾಚಿದನು ತವಸಿಗೈತಂದ ಕಾಶಿಯಲಿ!

ನಡುರಾತ್ರಿ; ಸದ್ದಿಲ್ಲ; ನಿದ್ದೆಯಲಿ ಮುಳುಗಿತ್ತು
ಜಗವೆಲ್ಲ. ಪರ್ಣಶಾಲೆಯೆ ತವಸಿಯಾಗಿತ್ತು!
ಬಾಗಿಲೆಂಬರೆ? ಅಲ್ಲ! ಆ ಕುಟೀರದ ಕಣ್ಣು
ತೆರೆಯಿತೊಯ್ಯನಿದೇನು! ಭುವನ ಮೋಹಿನಿ ಹೆಣ್ಣು
ಮೂಡಿಹಳು! ಪ್ರಚ್ಛನ್ನಪ್ರಣಯಿಯಾ ಸನ್ಯಾಸಿ
ನೋಡಿದರೆ: ಝಳಪಿಸುತ್ತಿದೆ ಮನ್ನಥ ಕರಾಸಿ;
‘ಮದನಾರಿ’ ಬಿರುದುಳ್ಳ ವಿಶ್ವೇಶನೂರಿನೊಳೆ,
ಪಾಪಾಪಹಾರಿಣೀ ಗಂಗೆಯಾ ತೀರದೊಳೆ!

ಬೆಳ್ದಿಂಗಳನೆ ಕಡೆದ ಹುಣ್ಣಿಮೆಯ ಬೆಣ್ಣೆಯಲಿ
ಕರುವಿಟ್ಟು ಕಯ್ಗಯ್ದ ಆ ಹೂವುಕೆನ್ನೆಯಲಿ
ಪ್ರೇಮ ಮಕರಂದ ತುಂಬಿದ ಜೇನು ಚೆಲ್ಲುತಿದೆ;
ಹೊನ್ನಾಗಿ ಜೊನ್ನಾಗಿ ಸಂಯಮವ ಕೊಲ್ಲುತಿದೆ;
ಕರೆದು ಬಗೆಯನು ಕೆಣಕಿ ಕಿತ್ತಡಿಯ ಗೆಲ್ಲುತಿದೆ;
ಕದಡುತಿದೆ ಸುಯ್ದೋರಿ ತರುಣಸನ್ಯಾಸಿಯೆದೆ?
ಕತ್ತಲೆಯ ಸಾರದಿಂದೆರಕ ಹೊಯ್ದಿರುವಂತೆ
ಕೂದಲಿದೆ. ಕಣ್ಣೊ ತಾವರೆಯಲ್ಲಿ ತುಂಬಿ ಸೆರೆ!
ತುಟಿಯೊ ಮೈಬಳ್ಳಿಯಲಿ ತೊಂಡೆ ಹಣ್ಣಾದಂತೆ!
ತುಂಬೆದೆಯನಾಂತಿರುವ ಕಟಿಯೊ ತಾನೊಂದು ಗೆರೆ!
ಎಲ್ಲ ರಾಗಗಳೆಲ್ಲ ಭೋಗಗಳುಮೊಂದಾಗಿ
ಮುತ್ತಿ ಬಂದಂತಿತ್ತು ತ್ಯಾಗ ಹನನಕ್ಕಾಗಿ!
ಇಂತು ನಿಂತಳು ಚೆಲುವೆ ಮುಗುಳು ನಗೆ ಮೊಗದೋರಿ,
ಮೂಗುತಿಯ ಕಾಂತಿಯನು ಮಿಂಚಿನಂದದಿ ಬೀರಿ!

ನೋಡಿದನು ತವಸಿ ಎವೆಯಿಕ್ಕದೆಯೆ. ‘ಯಾರಿವಳು?
ಮಾನವಿಯೊ? ಮೋಹಿನಿಯೊ? ಅಪ್ಸರಿಯೊ? ನಡುವಿರುಳು
ಸನ್ಯಾಸಿಯೆಲೆವನೆಗೆ ಬಂದಿಹಳು! ಕನಸೇನು?
ಕನಸಲ್ಲ; ಚೆನ್ನಾಗಿ ಕಣ್ದೆರೆದಿರುವೆ ನಾನು!’
ಎಂದು ಬಗೆಯುತ್ತಿರಲು ಬೆಚ್ಚಿಬಿದ್ದನು ತ್ಯಾಗಿ
ಇದ್ದಕಿದ್ದಂತೆ ತನ್ನಾ ಪ್ರಿಯೆಯ ಗುರುತಾಗಿ!
ಮಲಗಿದ್ದ ಶಯ್ಯೆಯಿಂದೊಡನೆದ್ದು ಪ್ರೀತಿಯಲಿ:
“ಶಶಿಕಲಾ, ಇಲ್ಲಿಗೆಂತೈತಂದೆ ರಜನಿಯಲಿ?
ನೂರಾರು ಹರಿದಾರಿಗಳ ದೂರದೂರಿಂದೆ
ಹೇಳಿಲ್ಲಿಗೇತಕ್ಕೆ ಯಾರೊಡನೆ ನೀಂ ಬಂದೆ?”
“ಪತಿದೇವ, ನೀನಗಲಿ ಬರೆ ನಾನು ಬಲುನೊಂದೆ.
ಪತಿತವಾಗಲು ಕಾಯ ಕಾಮುಕರ ಬಲದಿಂದೆ
ತೊರೆದದನು ತೊರೆಯಲ್ಲಿ ಬಂದೆ ಪತಿಸನ್ನಿಧಿಗೆ,
ನನ್ನೆಲ್ಲ ಹರಣದೊಲ್ಮೆಯ ಹಿರಿಯ ರಸ ನಿಧಿಗೆ.”

ತುಟಿಯದುರಿ ಎದೆಬೆದರಿ ಕಣ್ತುಂಬಿ ಕೈಚಾಚಿ
ತಬ್ಬಿದನು ಸನ್ಯಾಸಿ ಪ್ರೇಯಸಿಯ ಮೈ ಬಾಚಿ!
ಬೆಚ್ಚಿದನು. ಮಾಯವಾದಳೆ? ಎಲ್ಲಿ ಆ ಹೆಣ್ಣು?
ಕನಸೊಡೆದು ಸಜ್ಜೆಯೊಳೆ ತವಸಿ ತೆರೆದನು ಕಣ್ಣು:
ಏಂ ಮಾಯೆ? ಬೆಳಕಂಡಿಯಲಿ ಚಂದ್ರಿಕೆಯು ತೂರಿ
ಕೋಲಾಗಿ ಬಂದು ಬಿದ್ದಿದೆ ಮೊಗಕೆ! ಇದೆ ನಾರಿ?