ನಿನ್ನ ಜೊತೆಯಿಲ್ಲದೇಕಾಂತವಿದು ಕೊರೆಯುತಿದೆ

ಹೃತ್‌ಕಮಲವನು ವಜ್ರಕೀಟದಂತೆ;
ಮುಂದೆ ಬರುವಮೃತಕಿದು ಪೀಠಿಕೆಯೊ ನಾನರಿಯೆ;
ದಹಿಸುತಿಹುದಾ ಕಾಳಕೂಟದಂತೆ!
ಮುಳುಗಿದನು ಸಂಜೆರವಿ; ಬೈಗುಗಪ್ಪಿಳಿತಂದು
ಉಬ್ಬುತಗ್ಗನು ತುಂಬಿ ಸಮಗೈಯುತ:
ತಬ್ಬಲಿಯ ತೆರದಿ ನಾನೊಬ್ಬನೆಯೆ ನಿಂತಿಲ್ಲಿ
ನೆನೆವೆ ನಿನ್ನನು, ನಲ್ಲೆ, ಬಿಸುಸುಯ್ಯುತ!
ಸಾಕು ಈ ಏಕಾಂತ! ಅಯ್ಯೊ ಸಾಕೇಕಾಂತ!
ಪ್ರೇಮವಿಲ್ಲದೆ ನರಕ ಈ ಒಂಟಿ ವೇದಾಂತ!