ನಿನ್ನೊಂದು ಚೆಂದುಟಿಯ ಸವಿಮುತ್ತಿಗೆಂದು ನಾ

ಜನ್ಮ ಜನ್ಮಗಳೆತ್ತಿ ಬಯಸಿ ಬಂದೆ;
ಯುಗಯುಗಾಂತರದಲ್ಲಿ ಹುಡುಕಿ ತೊಳಲುತ ಬಳಲಿ
ಕಡೆಗಿಂದು ನಿಂದಿಹೆನು ನಿನ್ನ ಮುಂದೆ.

ನನ್ನಂತೆಯೇ ನೀನು ಹುಡುಕಿ ನೊಂದಿಹೆ, ಬಲ್ಲೆ;
ಸಾರುತಿದೆ ನಿನ್ನ ಕಣ್ಣಿನ ಪ್ರಣಯಕಾಂತಿ!
ಕಲ್ಪಾಂತರದ ಹಿರಿಯ ಬಯಕೆ ಫಲಿಸಲಿ ಇಂದು:
ಸ್ನೇಹಮೋಹದ ಮುತ್ತನಿಡು-ಓ ಎನ್ನ ಶಾಂತಿ!