ದಿನವೊಂದೆಯಾದರೂ ನೀನಿಲ್ಲದಿರೆ ಮನವು

ಕೊರಗುವುದು, ಕುದಿಯುವುದು, ಓ ಎನ್ನ ಮನದನ್ನ!
ಬೇಸರಿಕೆಯಿಂದ ಬೇವುದು ಜೀವ; ಕಾತರಿಸಿ
ಕೋರಿ ಬಾಯಾರುವುದು ಕಣ್ಣು ನಿನ್ನಾಕೃತಿಯ
ಸುಧೆಗೆ, ಓ ಚೆನ್ನ! ಹೋಗುವೆನು ಎಂದೆನಲು
ಹೋಗು ಎಂಬೆನು. ಹೋಗೆ ಕಣ್ಣೀರ ಕರೆಯುವೆನು
ಹಂಬಲಿಸಿ ಹಲುಬಿ. ತುಂಬುವುದು ನನ್ನಾತ್ಮವನು
ನಿನ್ನ ನೆನಪೊಂದೆ, ಹೇಳನ್ಯಕ್ಕೆ ತಾವೆಲ್ಲಿ,
ಓ ಎನ್ನ ಚಿನ್ನ! ಕಷ್ಟದಿಂದುಸಿರೆಳೆವೆ
ನಾಳೆ ನೀಂ ಬರುವೆಯೆಂಬಾಸೆಯಿಂದೆನ್ನ ರನ್ನಾ!