ನಿನ್ನ ಕಾಣಲೆನ್ನ ಕಣ್

ಕಾತರಿಸುತಿದೆ!
ನಿನ್ನ ಸೋಂಕಲೆನ್ನ ಮೆಯ್
ಹಾರಯಿಸುತಿದೆ!
ಬಿಸಿಲಿನುರಿಗೆ ಬೆಂದ ಭೂಮಿ
ಮುಂಗಾರನು ಹಾರುವಂತೆ;
ಬಾಯಾರಿದ ಹಸಿದ ಹಸುಳೆ
ಎದೆಯ ಸೊದೆಯ ಕೋರುವಂತೆ;
ರಸ ತುಂಬಿದ ಹೊಸ ತಾವರೆ
ಭೃಂಗ ಸಂಗಕೆಳಸುವಂತೆ;
ನೀರಾಳಕೆ ಮುಳುಗಿದವನು
ಉಸಿರಾಡಲು ಹೋರುವಂತೆ;
ನಿನ್ನ ಕಾಣಲೆನ್ನ ಕಣ್
ಕಾತರಿಸುತಿದೆ!
ನಿನ್ನ ಸೋಂಕಲೆನ್ನ ಮೆಯ್
ಹಾರಯಿಸುತಿದೆ!